ದಾವಣಗೆರೆ:ಬೆಣ್ಣೆ ನಗರಿ ದಾವಣಗೆರೆಯಲ್ಲಿ 2013ರ ಫಲಿತಾಂಶ ರಿಪೀಟ್ ಆಗಿದೆ. ದಾವಣಗೆರೆ ಮತದಾರರು ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದು, ಒಂದು ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿಸಿದ್ದಾರೆ. ವಿಶೇಷ ಅಂದರೆ ದಾವಣಗೆರೆ ದಕ್ಷಿಣದಿಂದ ತಂದೆ ಶಾಮನೂರು ಶಿವಶಂಕರಪ್ಪ 92ರ ವಯಸ್ಸಿನಲ್ಲಿ ಗೆದ್ದು ಬೀಗಿದರೆ, ಇತ್ತ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಪುತ್ರ ಎಸ್ಎಸ್ ಮಲ್ಲಿಕಾರ್ಜುನ್ ಮತ್ತೆ ಗೆಲುವಿನ ನಗೆ ಬೀರಿದ್ದಾರೆ.
ದಾವಣಗೆರೆ ಕಾಂಗ್ರೆಸ್ ಭದ್ರಕೋಟೆ:ಸತತವಾಗಿ ಇಲ್ಲಿನ ಮತದಾರರು ಕಾಂಗ್ರೆಸ್ ಆಶೀರ್ವಾದ ಮಾಡುತ್ತಲೇ ಬಂದಿದ್ದಾರೆ. ಅದರೆ 2018 ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಬಿಜೆಪಿ ಪಾಳೆಯ ಛಿದ್ರ ಮಾಡಿತ್ತು. ಇದೀಗ ಕಾಂಗ್ರೆಸ್ ತನ್ನ ಭದ್ರಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ದಾವಣಗೆರೆಯ ಪ್ರಬುದ್ಧ ಮತದಾರರು ಏಳು ಮತ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಜೈ ಅಂದಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ 92ನೇ ವಯಸ್ಸಿನಲ್ಲೂ ಗೆಲುವು ಸಾಧಿಸಿರುವುದ್ದು, ಇಡೀ ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಶಾಮನೂರು ಶಿವಶಂಕರಪ್ಪ ಗೆದ್ದ ಹಿರಿಯ ರಾಜಕಾರಣಿ ಎಂದು ಇತಿಹಾಸ ಬರೆದಿದ್ದಾರೆ.
ಇನ್ನು ಶಾಮನೂರು ಶಿವಶಂಕರಪ್ಪನವರ ಪುತ್ರ ಮಾಜಿ ಸಚಿವ ಮತ್ತೆ ಗೆಲ್ಲುವ ಮೂಲಕ ಸಚಿವರಾಗುವ ಹುಮ್ಮಸ್ಸಿನಲ್ಲಿದ್ದಾರೆ. ಮತ್ತೊಂದೆಡೆ ಹೊನ್ನಾಳಿ ಹೈವೋಲ್ಟೇಜ್ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿದ್ದ ಎಂಪಿ ರೇಣುಕಾಚಾರ್ಯಗೆ ಶಾಂತನಗೌಡ್ರು ಮಣ್ಣು ಮುಕ್ಕಿಸಿದ್ದಾರೆ. ಚನ್ನಗಿರಿಯಲ್ಲಿ ಶಿವಗಂಗಾ ಬಸವರಾಜ್, ಮಾಯಕೊಂಡದಲ್ಲಿ ಬಸವಂತಪ್ಪ, ಜಗಳೂರಿನಲ್ಲಿ ದೇವೇಂದ್ರಪ್ಪ ಅವರಿಗೆ ಮತದಾರ ಜೈ ಎಂದಿದ್ದು, ಹರಿಹರ ಒಂದು ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿದೆ. ಇಲ್ಲಿ ಬಿ ಪಿ ಹರೀಶ್ ಗೆದ್ದು ಬೀಗಿದ್ದಾರೆ.
ದಾವಣಗೆರೆ ಉತ್ತರ ಹಾಗು ದಕ್ಷಿಣದಲ್ಲಿ ತಂದೆ ಮಗ ಇಬ್ಬರೂ ಗೆಲುವಿನ ನಗಾರಿ ಬಾರಿಸಿದ್ದಾರೆ. ಈ ವೇಳೆ ಮಾತನಾಡಿದ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ, "ಜನ ತಮ್ಮ ತೀರ್ಪು ನೀಡಿದ್ದಾರೆ, ಕಾಂಗ್ರೆಸ್ ಸರ್ಕಾರ ಮಾಡುತ್ತೇವೆ. ಶಾಸಕರು ಸಿಎಂ ಯಾರು ಎಂಬುದನ್ನು ಆಯ್ಕೆ ಮಾಡುತ್ತಾರೆ. ಬಿಜೆಪಿ ಅಲೆಯಲ್ಲೇ ಕಾಂಗ್ರೆಸ್ ಕೊಡವಿ ಎದ್ದಿದೆ, ಬಿಜೆಪಿ ಅಭ್ಯರ್ಥಿ ವೀಕ್ ಕ್ಯಾಂಡಿಡೇಟ್ ಆಗಿದ್ದರು. ಅವಾಗಲೇ ಗೆಲ್ಲುತ್ತೇನೆ ಎಂದು ಹೇಳಿದ್ದೆ." ಎಂದು ಹೇಳಿದ್ರು.
ಬಳಿಕ ಎಸ್ಎಸ್ ಮಲ್ಲಿಕಾರ್ಜುನ್ ಪ್ರತಿಕ್ರಿಯಿಸಿ, "ಜಿಲ್ಲೆಯ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಏಳರಲ್ಲಿ ಆರು ಕ್ಷೇತ್ರಗಳನ್ನು ಗೆಲ್ಲಿಸಿದ್ದಾರೆ. ನಾನು ಕೃತಜ್ಞತೆ ಸಲ್ಲಿಸುವೆ. ಅಭಿವೃದ್ಧಿ ಪಥದಲ್ಲಿ ಕಾಂಗ್ರೆಸ್ ಸರ್ಕಾರ ಸಾಗುತ್ತೆ, ಬಿಜೆಪಿಯ ಭ್ರಷ್ಟ ಆಡಳಿತದಿಂದ ಬಡವರು ಬೇಸತ್ತಿದ್ದಾರೆ. 40% ಕಮಿಷನ್ನಲ್ಲಿ ಮುಳುಗಿದ್ದರಿಂದ ಅವರು ಜನರನ್ನು ಗಮನಿಸಿಲ್ಲ. ನಾನು ಹೇಳಿದ್ದೇ 135 ಸೀಟ್ ಬರುತ್ತೆ ಎಂದು ಆ ಫಲಿತಾಂಶ ಬಂದಿದೆ" ಎಂದರು.
ಏಳು ಕ್ಷೇತ್ರದಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಅರಳಿದ ಕಮಲ:ಏಳು ಕ್ಷೇತ್ರಗಳ ಪೈಕಿ ಆರು ಕ್ಷೇತ್ರದಲ್ಲಿ ಕೈ ಜಯಭೇರಿ ಬಾರಿಸಿದ್ದು, ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿದೆ. ಹರಿಹರದಲ್ಲಿ ಕಮಲ ಅರಳಿಸುವಲ್ಲಿ ಬಿ ಪಿ ಹರೀಶ್ ಯಶಸ್ವಿಯಾಗಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಅವರು,"ಮತದಾರರ ತೀರ್ಮಾನಕ್ಕೆ ಎಲ್ಲರೂ ತಲೆ ಬಾಗಲೆಬೇಕು, ಮತ್ತೆ ಬಿಜೆಪಿ ಸರ್ಕಾರ ಸ್ಥಾಪಿಸುವ ಹುಮ್ಮಸ್ಸಿನಲ್ಲಿದ್ದೆವು, ಅದರೆ ಜನರು ಕಾಂಗ್ರೆಸ್ಗೆ ಆಶೀರ್ವಾದ ಮಾಡಿದ್ದಾರೆ. ದಾವಣಗೆರೆಯಲ್ಲಿ ನಾನು ಒಬ್ಬನೇ ಬಿಜೆಪಿ ಶಾಸಕ" ಎಂದು ಹೇಳಿದ್ರು.