ದಾವಣಗೆರೆ: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ದಿನಕ್ಕೆ 3-4 ಜನರು ಸಾವನ್ನಪ್ಪುತ್ತಿದ್ದರೆ, ನಾನ್ ಕೋವಿಡ್ನಿಂದ ಹೆಚ್ಚು ಜನರು ಮೃತಪಡುತ್ತಿದ್ದಾರೆ. ಶವಗಳನ್ನು ಇರಿಸಲು ಸುಸಜ್ಜಿತವಾದ ಶವಾಗಾರದ ವ್ಯವಸ್ಥೆ ಇದ್ದು, ಇದರ ನಿರ್ವಹಣೆಯನ್ನು ಜಿಲ್ಲಾಸ್ಪತ್ರೆ ಮಾಡುತ್ತಿದೆ.
ಜಿಲ್ಲೆಯಲ್ಲಿ ದಿನನಿತ್ಯ 500 ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಆದ್ರೆ ಅದೃಷ್ಟವಶಾತ್ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ ಮಾತ್ರ ಕಡಿಮೆ ಇದೆ. ದಿನಕ್ಕೆ 3-4 ಜನರು ಕೊರೊನಾದಿಂದ ಸಾವನ್ನಪ್ಪುತ್ತಿದ್ದು, ನಾನ್ ಕೋವಿಡ್ನಿಂದಾಗಿ ಹೆಚ್ಚು ಜನರು ಕೊನೆಯುಸಿರೆಳೆಯುತ್ತಿದ್ದಾರೆ ಎಂದು ಡಿಹೆಚ್ಒ ನಾಗರಾಜ್ ತಿಳಿಸಿದ್ದಾರೆ.
ಹೀಗೆ ಸಾವನ್ನಪ್ಪುವವರ ಶವ ಇರಿಸಲು ಜಿಲ್ಲಾಸ್ಪತ್ರೆಯಲ್ಲಿ ಸುಸಜ್ಜಿತವಾದ ಶವಾಗಾರ ವ್ಯವಸ್ಥೆ ಇದೆ. 8 ಶವಗಳನ್ನು ಕೋಲ್ಡ್ ಸ್ಟೋರೆಜ್ನಲ್ಲಿ ಇರಿಸಬಹುದಾಗಿದ್ದು, ಶವಾಗಾರದೊಳಗಿರುವ ಕಟ್ಟೆ ಮೇಲೆ 3 ಶವಗಳನ್ನು ಸೇರಿಸಿ ಒಟ್ಟು 11 ಶವಗಳನ್ನು ಇರಿಸಬಹುದಾಗಿದೆ.
ಇನ್ನು ಶವಾಗಾರವನ್ನು ನಿರ್ವಹಿಸಲು ಒಬ್ಬರನ್ನು ನಿಯೋಜಿಸಲಾಗಿದ್ದು, ಕೊರೊನಾದಿಂದ ಸಾವನ್ನಪ್ಪಿದವರ ಶವಗಳನ್ನು ಸರಿಯಾಗಿ ಪ್ಯಾಕ್ ಮಾಡಿ ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗುತ್ತದೆ. ಕೊರೊನಾ ಇರುವ ಕಾರಣ ಹೆಚ್ಚು ಸಮಯ ಶವಾಗಾರದಲ್ಲಿ ಶವಗಳನ್ನು ಇರಿಸಲು ಅವಕಾಶ ಕಲ್ಪಿಸಿಲ್ಲ ಎಂದು ನಾಗರಾಜ್ ತಿಳಿಸಿದರು.