ದಾವಣಗೆರೆ:ಬೆಣ್ಣೆನಗರಿಯಲ್ಲಿ ರಣಕೇಕೆ ಹಾಕುತ್ತಿರುವ ಕೊರೊನಾ ಸೋಂಕು ಇಲ್ಲಿಗೆ ವಕ್ಕರಿಸಿದ್ದಾದರೂ ಹೇಗೆ? ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಬೆಣ್ಣೆ ನಗರಿಯಲ್ಲಿ ಕೊರೊನಾ ಹೆಚ್ಚಳಕ್ಕೆ ಕಡಿವಾಣ ಹಾಕುವುದು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿತ್ತು. ಮೊದಲು ಮೃತಪಟ್ಟ ಜಾಲಿನಗರದ ವೃದ್ಧನ ಸೊಸೆ ಗುಜರಾತ್‌ನಿಂದ ಬಂದಿದ್ದರಿಂದ ಅಲ್ಲಿಂದ ಈ ಸೋಂಕು ಬಂದಿರಬಹುದು ಎಂದು ಶಂಕಿಸಲಾಗಿತ್ತು. ಆದ್ರೆ, ಈಗ ಈರುಳ್ಳಿ ಲಾರಿಯಲ್ಲಿ ಹೋಗಿ ಬಂದವರಿಂದಲೇ ಈ ವೈರಾಣು ಪಸರಿಸಿದೆ ಎಂಬ ಸಂಗತಿ ಗೊತ್ತಾಗಿದೆ.
ದೆಹಲಿಯ ತಬ್ಲಿಗ್ ಜಮಾತ್‌ಗೆ ಹೋಗಿ ಬಂದವರಿಂದ ಸೋಂಕು ತಗುಲಿರಬಹುದು ಎಂಬ ಬಗ್ಗೆಯೂ ಅನುಮಾನ ವ್ಯಕ್ತಪಡಿಸಲಾಗಿತ್ತು. ಆದ್ರೆ, ಈಗ ಜಮಾತ್ ಗೆ ಹೋಗಿ ಬಂದ 70 ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರೆಲ್ಲರ ವರದಿಯೂ ನೆಗೆಟಿವ್ ಬಂದಿದೆ. ವಿದೇಶಕ್ಕೆ ಹೋಗಿ ಬಂದವರಿಂದಲೂ ಸೋಂಕು ಬಂದಿಲ್ಲ. ಹಾಗಾಗಿ, ಅಗತ್ಯ ವಸ್ತುಗಳನ್ನು ಹೊತ್ತು ಸಾಗಿ ಲಾರಿಗಳ ಓಡಾಟದಿಂದಲೇ ಸೋಂಕು ವಕ್ಕರಿಸಿದೆ ಎಂಬ ತೀರ್ಮಾನಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಂದಿದೆ.
ಬಾಗಲಕೋಟೆ, ಹಾಸನ, ಚಿತ್ರದುರ್ಗ, ಕೂಡ್ಲಿಗಿ ಸೇರಿದಂತೆ ಇತರೆಡೆಗಳಲ್ಲಿ ಅಗತ್ಯ ವಸ್ತುಗಳ ಲಾರಿಗಳು ಸಂಚರಿಸಿವೆ. ಇಲ್ಲಿಗೆ ಮೂವರು ಹೋಗಿ ಬಂದಿದ್ದಾರೆ. ಈ ಪೈಕಿ ಒಂದೇ ಕುಟುಂಬದ ಇಬ್ಬರು ಸದಸ್ಯರಿದ್ದು, ಇವರಿಂದಲೇ ಸೋಂಕು ತಗುಲಿದೆ ಎಂಬ ನಿಲುವಿಗೆ ಬರಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.