ದಾವಣಗೆರೆ: ಯುವಕನೋರ್ವನಿಗೆ ಖಾರದ ಪುಡಿ ಎರಚಿ, ಕುತ್ತಿಗೆ ಕೊಯ್ದು, ಆತನ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಂದು ದಾವಣಗೆರೆ ನಗರದಲ್ಲಿ ನಡೆದಿದೆ. ಭೀಕರ ಹತ್ಯೆಗೆ ಇಡೀ ದಾವಣಗೆರೆ ನಗರದ ಜನರು ಬೆಚ್ಚಿಬಿದ್ದಿದ್ದಾರೆ. 25 ರಿಂದ 30 ವರ್ಷದೊಳಗಿನ ಯುವಕನನ್ನು ಹತ್ಯೆ ಮಾಡಲಾಗಿದ್ದು, ಯುವಕನ ಗುರುತು ಪತ್ತೆಯಾಗಿಲ್ಲ. ಇನ್ನು, ಈ ಘಟನೆ ದಾವಣಗೆರೆ ನಗರದ ಶಾಮನೂರು ರಸ್ತೆಯ ಬಾರ್ವೊಂದರ ಸಮೀಪ ನಡೆದಿದೆ.
ಇಂದು ಬೆಳಗ್ಗೆ ಹತ್ಯೆ ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಯುವಕನ ಜೇಬಿನಲ್ಲಿ ಬೆಂಗಳೂರಿನಿಂದ ದಾವಣಗೆರೆಗೆ ಬಂದ ರೈಲು ಟಿಕೆಟ್ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಈ ಘಟನೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾನಗರ ಪೊಲೀಸರು ಕೊಲೆಯ ಆರೋಪಿಗಳನ್ನು ಪತ್ತೆ ಹಚ್ಚಲು ದಾವಣಗೆರೆ ನಗರದ ಶಾಮನೂರು ರಸ್ತೆಯಲ್ಲಿರುವ ಎಲ್ಲಾ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.