ಕರ್ನಾಟಕ

karnataka

ETV Bharat / state

ಬಾಲ್ಯದಲ್ಲಿ ಪುನೀತ್​ಗೆ ನಟನೆ ಹೇಳಿಕೊಟ್ಟಿದ್ದು ಹೊನ್ನವಳ್ಳಿ ಕೃಷ್ಣ.. ಹಳೆಯ ನೆನಪು ಮೆಲುಕು ಹಾಕಿದ ಹಿರಿಯ ನಟ - Honnavalli Krishna on Puneeth Rajkumar

ಪುನೀತ್‌ ನಮ್ಮ ಮಧ್ಯೆ ಇಲ್ಲ ಎಂಬುದನ್ನೂ ಈಗಲೂ ನನಗೆ ನಂಬಲು ಆಗುತ್ತಿಲ್ಲ, ನಮ್ಮ ಮನಸ್ಸಿಗೆ ಸಮಾಧಾನವಾಗುವಂತೆ ಒಳ್ಳೆಯ ಕೆಲಸ ಮಾಡಿದ್ರೆ ಬದುಕು ಸುಂದರವಾಗುತ್ತದೆ. ಎಲ್ಲಿಯವರೆಗೂ ಭಯವಿರುತ್ತೋ ಅಲ್ಲಿವರೆಗೆ ಜಯವಿರುತ್ತದೆ. ನನ್ನ ಮನಸ್ಸಿಗೆ ಸುಳ್ಳು ಹೇಳಬಾರದು ಎಂಬ ಭಯವಿದ್ದರೆ ಯಶಸ್ಸು ಖಂಡಿತ, ಈ ಗುಣಗಳಿಂದಲೇ ಪುನೀತ್‌ ಪವರ್‌ ಸ್ಟಾರ್‌ ಅಗಿ ಬೆಳೆದ್ರು ಎಂದು ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಹೇಳಿದ್ದಾರೆ.

Honnavalli Krishna
ಹೊನ್ನಾವಳ್ಳಿ ಕೃಷ್ಣ

By

Published : Nov 9, 2021, 4:00 AM IST

Updated : Nov 9, 2021, 6:25 AM IST

ದಾವಣಗೆರೆ:ಬೆಟ್ಟದ ಹೂವು ಚಿತ್ರದಲ್ಲಿ ಬಾಲನಟನಾಗಿ ನಟನೆ ಮಾಡಲ್ಲ ಎಂದು ಅಪ್ಪು ಹಠ ಮಾಡಿದ್ರು ಎಂದು ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಜಿಲ್ಲೆಯ ಹೊನ್ನಾಳ್ಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪುನೀತ್ ರಾಜ್​ ಕುಮಾರ್​ ಶ್ರದ್ಧಾಂಜಲಿ ಹಾಗೂ ನೇತ್ರದಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಓದಿದ್ದು 4ನೇ ತರಗತಿ ಮಾತ್ರ. ಅದ್ರೂ ಸಿನಿಮಾದಲ್ಲಿ ನಟಿಸಲು ಹೋದವನಲ್ಲ, ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಮೊದಲು ನಾನು ಅಪ್ಪುನನ್ನು ನೋಡಿದ್ದು. ಸನಾದಿ ಅಪ್ಪಣ್ಣ, ವಸಂತ ಗೀತೆ, ಮೊದಲಾದ ಚಿತ್ರಗಳಲ್ಲಿ ಅವನ ಜತೆಗಿದ್ದೆ. ಬೆಟ್ಟದ ಹೂ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಾನು ಅಲ್ಲಿ ಇರಲಿಲ್ಲ ಎಂಬ ಒಂದೇ ಕಾರಣಕ್ಕೆ ಅಪ್ಪು ನಟನೆ ಮಾಡಲ್ಲ ಎಂದು ಹಠ ಹಿಡಿದಿದ್ದರು. ಆಗ ಪಾರ್ವತಮ್ಮನವರು ನನಗೆ ಕರೆ ಮಾಡಿ ನನ್ನನ್ನು ಚಿತ್ರೀಕರಣದ ಸ್ಪಾಟ್‌ಗೆ ಕರೆದಿದ್ದರು. ನೀನು ಇಲ್ಲದೇ ಪುನೀತ್‌ ನಟನೆ ಮಾಡಲು ಒಪ್ಪುತ್ತಿಲ್ಲ ಎಂದು ತಿಳಿಸಿದ್ದರು.

ಕಷ್ಟಪಟ್ಟು ಚಿತ್ರೀಕರಣ ಸ್ಥಳಕ್ಕೆ ತಲುಪಿದ್ದೆ, ಅವರಿಗೆ ನಾನು ಮೊದಲು ನಟನೆ ಮಾಡಿ ತೋರಿಸಿಕೊಡಬೇಕಿತ್ತು. ನಾನು ನಟನೆ ಮಾಡಿ ತೋರಿಸಿದಂತೆ ಅಪ್ಪು ನಟನೆ ಮಾಡುತ್ತಿದ್ದರು ಎಂದು ಹಳೆಯ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು. ಭಕ್ತ ಪ್ರಹ್ಲಾದ ಚಿತ್ರೀಕರಣದಲ್ಲಿ ಮೈಮೇಲೆ ಹಾವು ಹಾಕಿಕೊಂಡು ನಟಿಸುವ, ಆನೆಗಳು ಸಾಗಿ ಬರುವ ದಾರಿಯಲ್ಲಿ ಮಲಗುವ ದೃಶ್ಯವನ್ನು ನಾನು ಮಾಡಿ ತೋರಿಸಿದ್ದೆ ಎಂದು ಹೇಳಿದರು.

ಅಪ್ಪು ತಮ್ಮ ತಂದೆ ಡಾ. ರಾಜ್ ಕುಮಾರ್‌ ನೋಡಿ ಹೆದರಿದ್ದರು..

ಡಾ. ರಾಜಕುಮಾರ್‌ ಅವರ ಹಿರಣ್ಯ ಕಶಿಪು ರೌದ್ರ ನರ್ತನಕ್ಕೆ ಪುನೀತ್‌ ಹೆದರಿದ್ದರು. ನಂತರ ರಾಜಕುಮಾರ್‌, ಇದು ಕೇವಲ ನಟನೆ ಮಾತ್ರ ಎಂದು ಅಪ್ಪುಗೆ ಸಮಾಧಾನ ಪಡಿಸಿದ್ರು. ಪುನೀತ್‌ ನಮ್ಮ ಮಧ್ಯೆ ಇಲ್ಲ ಎಂಬುದನ್ನೂ ಈಗಲೂ ನನಗೆ ನಂಬಲು ಆಗುತ್ತಿಲ್ಲ. ನಮ್ಮ ಮನಸ್ಸಿಗೆ ಸಮಾಧಾನವಾಗುವಂತೆ ಒಳ್ಳೆಯ ಕೆಲಸ ಮಾಡಿದ್ರೆ ಬದುಕು ಸುಂದರವಾಗುತ್ತದೆ. ಈ ಗುಣದಿಂದಲೇ ಪುನೀತ್‌ ಪವರ್‌ ಸ್ಟಾರ್‌ ಅಗಿ ಬೆಳೆದ್ರು ಎಂದು ಹಿರಿಯ ನಟ ತಮ್ಮ ಮತ್ತು ಪುನೀತ್​ ನಡುವಿನ ಸ್ನೇಹ ಸಂಬಂಧದ ಬಗ್ಗೆ ನೆನೆದು ಭಾವುಕರಾದ್ರು.

ಇದನ್ನು ಓದಿ:ಬಾಯಿಯಿಂದಲೇ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಬಿಡಿಸಿ ಗೌರವ ಸಲ್ಲಿಸಿದ ಅಭಿಮಾನಿ

Last Updated : Nov 9, 2021, 6:25 AM IST

ABOUT THE AUTHOR

...view details