ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು ಬೆಳಗ್ಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ 10ನೇ ಬಾರಿಗೆ ಕೋವಿಡ್ ಪರೀಕ್ಷೆ ಮಾಡಿಸಿದ್ದು, ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ರೇಣುಕಾಚಾರ್ಯ ಮಾಹಿತಿ ನೀಡಿದ್ದಾರೆ.
ರೇಣುಕಾಚಾರ್ಯಗೆ ಕೊರೊನಾ ದೃಢ... 10ನೇ ಬಾರಿಯ ಪರೀಕ್ಷೆಯಲ್ಲಿ ಪಾಸಿಟಿವ್! - Corona Latest News
ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅವರಿಗೆ ಕೊರೊನಾ ದೃಢಪಟ್ಟಿದೆ. ಈ ಹಿನ್ನೆಲೆ ಅವರ ಸಂಪರ್ಕಕ್ಕೆ ಬಂದವರಿಗೆ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದ್ದು, ವೈದ್ಯರ ಸಲಹೆ ಮೇರೆಗೆ ಐಸೋಲೇಶನ್ಗೆ ಒಳಗಾಗಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದ ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಮನವಿ ಮಾಡಿರುವ ಅವರು, CBC, RFT, LFT, ECG, ಸಿಟಿ ಸ್ಕ್ಯಾನ್, ಡಿ ಡೈಮರ್, LDH, Serum Ferricin ಹಾಗೂ CRP ಈ ಎಲ್ಲಾ ಪರೀಕ್ಷೆಗಳನ್ನು ವೈದ್ಯರು ಮಾಡಿದ್ದು ಯಾವುದೇ ತೊಂದರೆ ಇಲ್ಲವೆಂದು ತಿಳಿಸಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
"ಕಳೆದ 6 ತಿಂಗಳಿಂದ ಕೋವಿಡ್-19 ವಿರುದ್ಧ ನಾನೂ ಒಬ್ಬ ಕೊರೊನಾ ವಾರಿಯರ್ ಆಗಿ ನಿರಂತರ ಜನಸೇವೆ ಮಾಡುತ್ತಿದ್ದು, ನನ್ನ ಮತ ಕ್ಷೇತ್ರದ ಬಂಧುಗಳು ನಿಮ್ಮ ಯಾವುದೇ ಸಮಸ್ಯೆಗಳಿಗೆ ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಬಹುದು. ನಿಮ್ಮೆಲ್ಲರ ಹಾರೈಕೆ ಹಾಗೂ ಆಶೀರ್ವಾದದಿಂದ ನಾನು ಆದಷ್ಟು ಬೇಗ ಗುಣಮುಖನಾಗಿ ಬರುತ್ತೇನೆ, ನನ್ನ ಆರೋಗ್ಯದ ಜೊತೆಗೆ ನಿಮ್ಮೆಲ್ಲರ ಯೋಗಕ್ಷೇಮವು ನನಗೆ ಅಷ್ಟೇ ಮುಖ್ಯವಾಗಿದೆ'' ಎಂದಿದ್ದಾರೆ.