ದಾವಣಗೆರೆ : ಜಿಲ್ಲೆಯಲ್ಲಿ ಹೊನ್ನಾಳಿ ಡಾನ್ ಎಂದೇ ಖ್ಯಾತಿ ಹೊಂದಿದ್ದ ಹೋರಿ ಅನಾರೋಗ್ಯದಿಂದ ಮೃತಪಟ್ಟಿದೆ. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಹೋರಿ ಅಗಲಿಕೆಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಜಿಲ್ಲೆಯ ಹೊನ್ನಾಳಿ ಪಟ್ಟಣದ ನಿವಾಸಿಗಳಾದ ಮಹೇಶ ಮತ್ತು ಚಂದ್ರು ಸಹೋದರರಿಗೆ ಸೇರಿದ್ದ ಡಾನ್ ಹೆಸರಿನ ಹೋರಿಯನ್ನು ಬಹಳ ಪ್ರೀತಿಯಿಂದ ಸಾಕಿದ್ದರು. ಈ ಹೋರಿ ದಾವಣಗೆರೆ, ಶಿವಮೊಗ್ಗ, ಹಾವೇರಿ ಹೀಗೆ ಹತ್ತಾರು ಜಿಲ್ಲೆಯಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು. ಇನ್ನು ಈ ಹೋರಿ ಅಖಾಡಕ್ಕಿಳಿದರೆ ಸಾಕು ಅದನ್ನು ವೀಕ್ಷಿಸಲು ಅಭಿಮಾನಿಗಳು ಕಾಯುತ್ತಿದ್ದರು.