ದಾವಣಗೆರೆ: ಸರ್ಕಾರಿ ವ್ಯಾಜ್ಯಗಳ ನಿರ್ವಹಣೆಗೆ ನೂತನ ಕಾನೂನು ತರುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದರು. ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠಕ್ಕೆ ಭೇಟಿ ನೀಡಿ ಪ್ರಸನ್ನಾನಂದ ಪುರಿ ಶ್ರೀಯವರನ್ನು ಭೇಟಿಯಾದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಿ ವ್ಯಾಜ್ಯಗಳ ನಿರ್ವಹಣೆಗೆ ಕಾನೂನು ತರುತ್ತಿದ್ದೇವೆ. ಬಡವರ ಪ್ರಕರಣಗಳು ಕೋರ್ಟ್ನಲ್ಲಿ ವಿಳಂಭವಾಗುತ್ತಿವೆ. ಈ ಕೇಸ್ಗಳು ಅದಷ್ಟು ಬೇಗ ಇತ್ಯರ್ಥವಾಗಬೇಕು. ಹೀಗಾಗಿ ಅದರ ಬಗ್ಗೆ ಕಾನೂನು ತರಲು ಮುಂದಾಗಿದ್ದೇವೆ ಎಂದರು.
ಇನ್ನು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ವರ್ಗವಣೆ ದಂಧೆ ನಮ್ಮ ಸರ್ಕಾರದಲ್ಲಿ ನಡೆಯೋದಿಲ್ಲ, ಇದಕ್ಕೆ ಸಿಎಂ ಸಿದ್ದರಾಮಯ್ಯನವರು ಆಸ್ಪದ ಕೊಡಿವುದಿಲ್ಲ. ದೂರು ಇದ್ದರೆ ಕೊಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದರು ಎಂದು ಸಚಿವ ಹೆಚ್ ಕೆ ಪಾಟೀಲ್ ಅವರು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಚುನಾವಣೆಯ ಮೊದಲು ಎಲ್ಲಾ ಮಠಗಳ ಜೊತೆ ಅನ್ಯೋನ್ಯ ಸಂಬಂಧ ಇಟ್ಟಿದ್ದೇ, ಇಷ್ಟು ಮಟ್ಟದ ಗೆಲುವು ಸಾಧಿಸಲು ಮಠಗಳು, ಸ್ವಾಮೀಜಿಗಳ ಆಶೀರ್ವಾದ ಕೂಡ ಒಂದು ಕಾರಣ. ಸ್ವಾಮೀಜಿಗಳ ಜೊತೆ ವಿಶೇಷ ಸಂಪರ್ಕ ಹೊಂದಿದವರು ನಾವು. ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಹೀಗೆ ಹತ್ತು ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದು, ರಾಜ್ಯದ ಅಭಿವೃದ್ಧಿ ಜೊತೆ ಹಲವು ಚರ್ಚೆಯನ್ನು ಪ್ರಸನ್ನಾನಂದ ಪುರಿ ಶ್ರೀಯವರ ಜೊತೆ ಮಾಡಿದೆವು ಎಂದು ತಿಳಿಸಿದರು.