ದಾವಣಗೆರೆ :ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಿನೆದಿನೇ ಹೆಚ್ಚುತ್ತಿವೆ. ವೇಗದ ಮಿತಿ ನಿಗದಿ ಮಾಡಲಾಗಿದ್ದರೂ ಪಾಲಿಸುತ್ತಿರುವವರ ಸಂಖ್ಯೆ ಕಡಿಮೆ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಹೋಗುವ ಸವಾರರಿಗೆ ತಕ್ಕ ಪಾಠ ಕಲಿಸಲು ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಅಳವಡಿಕೆ ಕಾರ್ಯವೂ ವೇಗವಾಗಿ ಸಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಶಾಲಾ ಆವರಣ, ರಸ್ತೆ ತಿರುವು ಸೇರಿ ನಗರ ವ್ಯಾಪ್ತಿಯಲ್ಲಿ ಹಲವೆಡೆ 40 ಕಿ.ಮೀ ವೇಗದಮಿತಿ ನಿಗದಿ ಮಾಡಿದ್ದರೂ ಸವಾರರು ಕ್ಯಾರೇ ಎನ್ನುತ್ತಿಲ್ಲ. ಶೇ.80ರಷ್ಟು ಮಂದಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಅವರನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ.
ಪೊಲೀಸ್ ಇಲಾಖೆಯೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳ ಜೊತೆ ಅದಕ್ಕೆ ಕಡಿವಾಣ ಹಾಕಲು ಇಲಾಖೆ ಚರ್ಚಿಸಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಸಮಗ್ರ 'ಇಂಟಿಗ್ರೇಟೆಡ್ ಟ್ರಾಫಿಕ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದು, ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಲಾರಿ ಸೇರಿ ಬೃಹತ್ ವಾಹನಗಳ ವೇಗಕ್ಕೆ ಮಿತಿ ಹಾಕಲು ಸಾರಿಗೆ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.