ದಾವಣಗೆರೆ:ಅದು ಐತಿಹಾಸಿಕ ಕೆರೆ. ಒಂದು ಕಾಲದಲ್ಲಿ ಇಡೀ ಗ್ರಾಮದ ಸುತ್ತಮುತ್ತಲಿನ ಜಮೀನುಗಳಿಗೆ ನೀರುಣಿಸುವ ಏಕೈಕಾ ಜೀವಜಲದ ನೆಲೆ. ಆದ್ರೆ ಈ ಕೆರೆಯಲ್ಲಿ ಇತ್ತೀಚಿಗೆ ಹನಿ ನೀರಿಲ್ಲದೆ ಇಡೀ ಕೆರೆ ಬಣಗುಡುತ್ತಿತ್ತು. ಇದೀಗ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ದಾವಣಗೆರೆ ತಾಲೂಕಿನ ಹೆಬ್ಬಾಳ ಐತಿಹಾಸಿಕ ಕೆರೆ 50 ವರ್ಷಗಳ ಬಳಿಕ ತುಂಬಿ ಕೋಡಿಬಿದ್ದಿದ್ದು, ಗ್ರಾಮಸ್ಥರು ಕುಣಿದು ಕುಪ್ಪಳಿಸಿ ಸಂತಸ ವ್ಯಕ್ತಪಡಿಸಿದರು.
ಹೆಬ್ಬಾಳು ಗ್ರಾಮದಲ್ಲಿ ಸಂತಸ ಮನೆ ಮಾಡಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಗ್ರಾಮದಲ್ಲಿರುವ ಕೆರೆಯಲ್ಲಿ ಹನಿ ನೀರಿಲ್ಲದೆ ಇಡೀ ಕೆರೆ ಬಣಗುಡುತ್ತಿತ್ತು. ಮೆಕ್ಕೆಜೋಳ, ಅಡಿಕೆ ನೆಲಕಚ್ಚುವ ಹಂತ ತಲುಪಿದ್ದವು. ಆದರೆ, ನಿರಂತರವಾಗಿ ಮಳೆ ಬೀಳುತ್ತಿರುವ ಪರಿಣಾಮ ಈ ಗ್ರಾಮದ ಕೆರೆಗೆ ಜೀವಕಳೆ ಬಂದಿದೆ. ಇಡೀ ಕೆರೆ ಜಲರಾಶಿಯಿಂದ ತುಂಬಿ ಕೋಡಿ ಬಿದ್ದಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕೆರೆ ತುಂಬಿದ್ದರಿಂದ ರೈತರು ಹಾಗು ಗ್ರಾಮಸ್ಥರು ಕುಣಿದು ಕುಪ್ಪಳಿಸುತ್ತಿದ್ದು, ಅವರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಇನ್ನು, ಈ ಕೆರೆ ಐವತ್ತು ವರ್ಷಗಳ ಬಳಿಕ ಸಂಪೂರ್ಣವಾಗಿ ಭರ್ತಿಯಾಗಿ ಕೋಡಿಬಿದ್ದಿದೆ. ಕಳೆದ ಐವತ್ತು ವರ್ಷಗಳ ಹಿಂದೆ ಇದೇ ಕೆರೆಯನ್ನು ನೆಚ್ಚಿಕೊಂಡಿದ್ದ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಇದ್ದಿದ್ದರಿಂದ ಪಕ್ಕದ ಊರುಗಳಿಗೆ ತೆರಳಿ ನೀರು ತಂದು ಕುಡಿದಿರುವ ನೆನಪುಗಳನ್ನು ಗ್ರಾಮಸ್ಥರು ಮೆಲುಕು ಹಾಕಿದರು.
'ಕಳೆದ 45 ರಿಂದ 50 ವರ್ಷಗಳ ಕಾಲ ಈ ಕೆರೆಯಲ್ಲಿ ನೀರು ಕಂಡಿದ್ದಿಲ್ಲ. ಮಳೆ ಬಿದ್ದ ಪರಿಣಾಮ ಕೆರೆ ತುಂಬಿದೆ. ಮೆಕ್ಕೆಜೋಳ, ಅಡಿಕೆ, ತೆಂಗು, ಸೊಪ್ಪು ಬೆಳೆಗೆ ಈ ನೀರು ಅವಶ್ಯಕವಾಗಿದೆ ಎಂದು' ಗ್ರಾಮಸ್ಥರಾದ ವಿಜಯ್ ತಿಳಿಸಿದರು.