ದಾವಣಗೆರೆ: ಕಳೆದ ಸಂಜೆ ಸುರಿದ ಧಾರಾಕಾರ ಮಳೆಗೆ ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ಜನ ತತ್ತರಿಸಿ ಹೋಗಿದ್ದಾರೆ. ಭಾರಿ ಮಳೆಯಿಂದಾಗಿ ಹೆಬ್ಬಾಳು ಗ್ರಾಮದಲ್ಲಿ ಅವಾಂತರಗಳೇ ಸೃಷ್ಟಿಯಾಗಿದ್ದು, ಗ್ರಾಮಸ್ಥರು ಇಡೀ ರಾತ್ರಿ ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಳೆ ಅಬ್ಬರಕ್ಕೆ ದಾವಣಗೆರೆ ಮಂದಿ ತತ್ತರ.. ಜ್ಯೂಸ್ ತಯಾರಕ ಘಟಕ ಮುಳುಗಡೆ
ಮಳೆ ಅಬ್ಬರಕ್ಕೆ ದಾವಣಗೆರೆ ಜಿಲ್ಲೆಯ ಹೆಬ್ಬಾಳು ಗ್ರಾಮದ ಜನರು ತತ್ತರಿಸಿ ಹೋಗಿದ್ದಾರೆ. ಸಂಸದ ಸಿದ್ದೇಶ್ವರ್ ಒಡೆತನದ ಫ್ಯಾಕ್ಟರಿಗೆ ನೀರು ನುಗ್ಗಿದ್ದು, ಜಲಾವೃತಗೊಂಡಿದೆ.
ಗ್ರಾಮದಲ್ಲಿರುವ ಸರಮಾಲೆ ಶ್ರೀ ರುದ್ರೇಶ್ವರ ಪ್ರೌಢಶಾಲೆಗೆ ಮಳೆ ನೀರು ನುಗ್ಗಿದ್ದರಿಂದ ಇಡೀ ಶಾಲೆ ಸಂಪೂರ್ಣ ಜಲಾವೃತವಾಗಿದೆ. ಇದಲ್ಲದೆ ಶ್ರೀ ರುದ್ರೇಶ್ವರ ಪ್ರಾಥಮಿಕ ಮತ್ತು ನರ್ಸರಿ ಶಾಲೆಗೂ ಕೂಡ ಜಲದಿಗ್ಬಂಧನ ಹಾಕಿದೆ. ಸಾಕಷ್ಟು ಮನೆಗಳಿಗೆ ನೀರು ನುಗ್ಗಿದರಿಂದ ಮಹಿಳೆಯರು ನೀರನ್ನು ಹೊರ ಹಾಕಲು ಹರಸಾಹಸಪಟ್ಟರು. ಇದಲ್ಲದೆ ಮಳೆಯಿಂದಾಗಿ ಹೊಲ ಮತ್ತು ಬಾಳೆ ತೋಟಗಳು ಮಳೆ ನೀರಿನಿಂದ ಜಲಾವೃತವಾಗಿವೆ.
ಜ್ಯೂಸ್ ತಯಾರಕ ಘಟಕ ಮುಳುಗಡೆ : ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸಂಸದ ಜಿಎಂ ಸಿದ್ದೇಶ್ವರ್ ಒಡೆತನದ ಜ್ಯೂಸ್ ತಯಾರಕ ಘಟಕ ಜಿಎಂ ಆಗ್ರೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಳೆ ನೀರಿನಿಂದ ಮುಳುಗಡೆಯಾಗಿದೆ.