ದಾವಣಗೆರೆ:ಎರಡನೇ ದಿನವೂ ಮಳೆ ಮುಂದುವರೆದ ಪರಿಣಾಮ ಭದ್ರಾ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿ ಕಾಲುವೆ ಒಡೆದು ರೈತರ ನೂರಾರು ಹೆಕ್ಟೇರ್ ಭತ್ತದ ಬೆಳೆ ಜಲಾವೃತವಾಗಿದೆ.
ಮಹಾ ಮಳೆಗೆ ಒಡೆದ ಭದ್ರಾ ಕಾಲುವೆ: ರೈತರ ಬೆಳೆ ಸಂಪೂರ್ಣ ನಾಶ ಹೌದು, ಹರಿಹರ ತಾಲೂಕಿನಲ್ಲಿ ಮಳೆ ಎರಡನೇ ದಿನಕ್ಕೆ ಮುಂದುವರೆದ ಕಾರಣ ದೀಟೂರು ಗ್ರಾಮದ ಭದ್ರಾ ಕಾಲುವೆ ಒಡೆದು ಭತ್ತದ ಜಮೀನುಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಕಟಾವಿಗೆ ಬಂದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ.
ರೈತರು ತಮ್ಮ ಹೊಲಗಳಿಗೆ ನುಗ್ಗುತ್ತಿರುವ ನೀರನ್ನು ತಡೆಹಿಡಿಯಲು ಹರಸಾಹಸ ಪಡುತ್ತಾ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ: ಹರಿಹರ ತಾಲೂಕಿನ ವಿವಿಧ ಭಾಗಗಳಲ್ಲಿ ಭದ್ರಾ ಹಾಗೂ ದೇವರಬೆಳಕೆರೆ ಡ್ಯಾಂನ ಕಾಲುವೆಗಳು ಒಡೆದು ಜಮೀನಿಗಳಿಗೆ ನೀರು ನುಗ್ಗುತ್ತಿದ್ದರೂ ಸಹ ನೀರು ನಿಲ್ಲಿಸಲು ನೀರಾವರಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸ್ಥಳ ಪರಿಶೀಲಿಸಿದ ಅಧಿಕಾರಿಗಳು ರೈತರಿಗೆ ಸಾಂತ್ವನ ಹೇಳುವ ಸೌಜನ್ಯವೂ ಸಹ ಹೊಂದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.