ದಾವಣಗೆರೆ: ನಿನ್ನೆ ರಾತ್ರಿ ಸುರಿದ ಭಾರೀ ಮಳೆ, ಗಾಳಿಗೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಬೆಳೆ ನೆಲ ಕಚ್ಚಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೊರೊನಾ ನಡುವೆ ಮಳೆರಾಯನ ಅವಂತಾರ: ದಾವಣಗೆರೆಯಲ್ಲಿ ಬೆಳೆ ಹಾನಿ - ದಾವಣಗೆರೆಯಲ್ಲಿ ಕೊರೊನಾ
ದಾವಣಗೆರೆ ಜಿಲ್ಲೆಯಲ್ಲಿ ಸುರಿದ ಧಾರಕಾರ ಮಳೆಗೆ ರೈತರ ಬೆಳೆ ನೆಲ ಕಚ್ಚಿದ್ದು,ಅನ್ನದಾತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
ತಾಲೂಕಿನ ಹೊನ್ನನಾಯಕನಹಳ್ಳಿ , ಭಾವಿಹಾಳ್, ನರಗನಹಳ್ಳಿ, ಅಣ್ಣಾಪುರ, ಸುಲ್ತಾನಿಪುರ ಗ್ರಾಮಗಳಲ್ಲಿ ಭಾರಿ ಹಾನಿ ಸಂಭವಿಸಿದೆ. ದೇವೇಂದ್ರಪ್ಪ ಎಂಬುವವರು ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಬಾಳೆ ನೆಲಕ್ಕುರುಳಿ ನಷ್ಟವಾಗಿದೆ.
ಸುತ್ತಮುತ್ತಲ ಗ್ರಾಮದಲ್ಲಿ 500ಕ್ಕೂ ಹೆಚ್ಚು ಅಡಿಕೆ ಮರ ಧರೆಗೆ ಉರುಳಿದ್ದು, 20ಕ್ಕೂ ಹೆಚ್ಚು ಮನೆಗಳ ಮೇಲ್ಚಾವಣಿ ಜಖಂಗೊಂಡಿವೆ. ಕೊರೊನೊ ಸಂಕಷ್ಟದಲ್ಲಿದ್ದ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದೆಡೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮತ್ತೊಂದೆಡೆ ಗಾಳಿ, ಮಳೆಯಿಂದ ಬೆಳೆ ನಾಶವಾಗಿರುವುದರಿಂದ ಜಿಲ್ಲಾಡಳಿತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.