ದಾವಣಗೆರೆ:ಜಿಲ್ಲೆಯಲ್ಲಿ ಭಾರಿ ಮಳೆಗೆ ಹಲವೆಡೆ ಅನಾಹುತ ಸಂಭವಿಸಿದೆ. ಹರಿದ್ರಾವತಿ ನದಿ ಆರ್ಭಟದಿಂದ ಹತ್ತಾರು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಚಿರಡೋಣಿ ಹಾಗೂ ದೊಡ್ಡಘಟ್ಟ ಗ್ರಾಮಗಳ ಸಂಪರ್ಕ ಸೇತುವೆ ಮುಳುಗಡೆಯಾಗಿದ್ದು, ರೋಗಿಯನ್ನು ಕರೆತಂದ ಆಂಬ್ಯುಲೆನ್ಸ್ ಸಂಚರಿಸಲಾಗದೆ ಹಾಗೆಯೇ ಮರಳಿದೆ.
"ಪ್ರತಿ ಸಲ ಮಳೆ ಬಂದಾಗಲೂ ನಮ್ಮ ಪರದಾಟ ಸಾಮಾನ್ಯವಾಗಿದ್ದು, ದಶಕಗಳಿಂದಲೂ ಜನಪ್ರತಿನಿಧಿಗಳಿಗೆ ಸುಸಜ್ಜಿತ ಸೇತುವೆ ನಿರ್ಮಾಣಕ್ಕೆ ಮನವಿ ಮಾಡಿದರೂ ಸ್ಫಂದನೆಯಿಲ್ಲ. ಮಾಯಕೊಂಡ ಕ್ಷೇತ್ರದ ಶಾಸಕರ ನಿರ್ಲಕ್ಷ್ಯ ಮುಂದುವರೆದಿದೆ. ರಾಜಕಾರಣಿಗಳು ವೋಟಿಗಾಗಿ ಮಾತ್ರ ಬರುತ್ತಾರೆ" ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಡಕೆ ತೋಟ ಜಲಾವೃತ:ದೊಡ್ಡಘಟ್ಟ ಹಾಗೂ ಚಿರಡೋಣಿ ಗ್ರಾಮಗಳಲ್ಲಿ ಅಡಕೆ ತೋಟಗಳು ದ್ವೀಪದಂತೆ ಮಾರ್ಪಟ್ಟಿವೆ. ರೈತರು ತಮ್ಮ ಜಮೀನುಗಳಿಗೆ ಹೋಗಲೂ ಆಗುತ್ತಿಲ್ಲ. ತೋಟದಲ್ಲಿರುವ ಪಂಪ್, ಸಾಮಗ್ರಿಗಳು ನೀರುಪಾಲಾಗಿದೆ. ನಾಟಿ ಮಾಡಿದ್ದ ಭತ್ತದ ಗದ್ದೆಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ.
ಶಾಲಾ ಬಸ್ ಪಲ್ಟಿ:ಮಳೆ ನಡುವೆಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಶಾಲಾ ಬಸ್ ಭತ್ತದ ಗದ್ದೆಗೆ ಪಲ್ಟಿಯಾದ ಘಟನೆ ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದ ಬಳಿ ಸಂಭವಿಸಿದೆ. ಕವಳಿ ತಾಂಡದಿಂದ ಹೊರಟ ಬಸ್ನಲ್ಲಿದ್ದ 10ಕ್ಕೂ ಅಧಿಕ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸ್ಥಳೀಯರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಬಸ್ ಕೂಲಂಬಿ ಗ್ರಾಮದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಶಾಲೆಗೆ ಸೇರಿದ್ದಾಗಿದೆ. ಬಸವಾಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ನದಿಗೆ ಉರುಳಿದ ಕಾರು: 6 ತಿಂಗಳ ಮಗು ಸೇರಿ ಕುಟುಂಬದ ನಾಲ್ವರು ಪವಾಡದಂತೆ ಪಾರು!