ಹರಿಹರ: ತಂಬಾಕು ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನಗರದ ವಿವಿಧೆಡೆ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದ ಅಧಿಕಾರಿಗಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿದರು.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಲ ಕಾರ್ಮಿಕರ ಯೋಜನೆ, ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದವು.
ಅಪರ ಜಿಲ್ಲಾಧಿಕಾರಿ ತಂಡ ರಚಿಸಿಕೊಂಡು ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಅಧಿನಿಯಮ-2003 ಸೆಕ್ಷನ್ 4 ರಡಿ 20 ಹಾಗೂ ಸೆಕ್ಷನ್ 6ಎ ಅಡಿಯಲ್ಲಿ 3 ಪ್ರಕರಣ ಸೇರಿ ಒಟ್ಟು 23 ಪ್ರಕರಣಗಳನ್ನು ದಾಖಲಿಸಿಕೊಂಡರು. ನಿಯಮ ಉಲ್ಲಂಘಿಅಸಿದವರಿಂದ 2600 ರೂ. ದಂಡ ವಿಧಿಸಲಾಯಿತು.
ತಾಲೂಕಿನ ಪಿ.ಬಿ.ರಸ್ತೆ ಮತ್ತು ತೇರುಗಡ್ಡೆ ರಸ್ತೆಯ ಸುತ್ತಮುತ್ತಲಿನ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಪಾನ್‌ಶಾಪ್ ಸೇರಿದಂತೆ ಇತರೆಡೆ ದಾಳಿ ಮಾಡಿದರು. ಇದೇ ವೇಳೆ ಸಾರ್ವಜನಿಕ ಸ್ಥಳದಲ್ಲಿರುವ ಅಂಗಡಿ ಮಾಲೀಕರು ಧೂಮಪಾನ ನಿಷೇಧದ ಬಗ್ಗೆ ಪ್ರದರ್ಶಿಸಬೇಕಾದ ಫಲಕಗಳನ್ನು ಕಟ್ಟುನಿಟ್ಟಾಗಿ ಅಳವಡಿಸುವಂತೆ ತಾಕೀತು ಮಾಡಿದರು.
ದಾಳಿಯಲ್ಲಿ ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ, ಉಪ ತಹಶೀಲ್ದಾರ್ ನಟರಾಜ, ತಾಲೂಕು ಆರೋಗ್ಯ ಅಧಿಕಾರಿ ಡಾ. ಡಿ.ಎಂ. ಚಂದ್ರಮೋಹನ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಹೆಚ್. ಪಾಟೀಲ್, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ, ಸಮಾಜ ಕಾರ್ಯಕರ್ತ ಕೆ.ಪಿ. ದೇವರಾಜ್, ನಗರಸಭೆಯ ಆರೋಗ್ಯ ನಿರೀಕ್ಷಕ ಕೋಡಿ ಭೀಮರಾಯಪ್ಪ, ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ಅಶೋಕ.ಕೆ, ಹಿರಿಯ ಆರೋಗ್ಯ ಸಹಾಯಕ ಎಂ.ವಿ. ಹೊರಕೇರಿ, ಪೊಲೀಸ್ ಇಲಾಖೆಯ ಸಿಪಿಸಿ ರಾಧಾಕೃಷ್ಣ.ಕೆ.ಪಿ ಸೇರಿದಂತೆ ಇತರರಿದ್ದರು.