ಹರಿಹರ:ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ದಲಿತ ಯುವತಿ ಮೇಲೆ ನಡೆದಿರುವ ಅತ್ಯಾಚಾರ ಹಾಗೂ ಕೊಲೆ ಘಟನೆ ಖಂಡಿಸಿ ನಗರದಲ್ಲಿ ಡಿಎಸ್‌ಎಸ್‌ನಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಫಕ್ಕೀರಸ್ವಾಮಿ ಮಠದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ತಮಟೆ ಬಾರಿಸುತ್ತಾ ಯುಪಿ ಸಿಎಂ ಆದಿತ್ಯ ನಾಥ್ ಅವರ ಅಣಕು ಶವಯಾತ್ರೆ ನಡೆಸಿದ ಪ್ರತಿಭಟನಾಕಾರರು ತಾಲೂಕು ಕಛೇರಿಗೆ ಆಗಮಿಸಿ ಕೆಲ ಹೊತ್ತು ಧರಣಿ ಸತ್ಯಾಗ್ರಹ ನಡೆಸಿದರು.
ನಂತರ ಅತ್ಯಾಚಾರ ಘಟನೆ ಬಗ್ಗೆ ಸ್ವತಂತ್ರ, ನಿಷ್ಪಕ್ಷಪಾತ ತನಿಖೆ ನಡೆಸಲು ಆಗ್ರಹಿಸಿ ಡಿಎಸ್‌ಎಸ್‌ನಿಂದ (ಕೃಷ್ಣಪ್ಪ ಸ್ಥಾಪಿತ) ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ನಂತರ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಸೆ.14ರಂದು ಉತ್ತರ ಪ್ರದೇಶದ ಹಥ್ರಾಸ್ನಲ್ಲಿ 19 ವರ್ಷದ ಮನೀಶಾ ವಾಲ್ಮೀಕಿ ಎಂಬ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಪೈಶಾಚಿಕ ದಾಳಿ ಮಾಡಿರುವ ಆರೋಪಿಗಳನ್ನು ಯೋಗಿ ಆದಿತ್ಯನಾಥ್ ಸರ್ಕಾರ ರಕ್ಷಿಸಲು ಮುಂದಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದರು.
ಅತ್ಯಾಚಾರ ನಡೆಸಿದ ನರರಕ್ಕಸರು ನಾಲಿಗೆ ಕತ್ತರಿಸಿದ್ದಲ್ಲದೆ, ಬೆನ್ನು ಮೂಳೆಯನ್ನು ಮುರಿದು ಹಾಕಿದ್ದರಿಂದ ಯುವತಿ ಸಾವನ್ನಪ್ಪಿದ್ದಾಳೆ. ಸಾವಿನ ಬಳಿಕ ಇಡೀ ಪ್ರಕರಣವನ್ನು ಮುಚ್ಚಿಹಾಕುವ ಯತ್ನವಾಗಿ ಪೊಲೀಸರು ಶವವನ್ನು ನೋಡಲೂ ಅವಕಾಶವಾಗದಂತೆ ಮನೆಯವರನ್ನು ಕೂಡಿ ಹಾಕಿ, ಅರ್ಧರಾತ್ರಿ ವೇಳೆ ಶವ ಸುಟ್ಟು ಹಾಕುವ ಮೂಲಕ ಸಾಕ್ಷಿ ನಾಶ ಮಾಡಿರುವುದು ಸಂವಿಧಾನ ಬದ್ದ ದೇಶಕ್ಕೆ ಕಳಂಕಕಾರಿಯಲ್ಲದೆ, ಕಾನೂನಿನ ಆಡಳಿತ ನಡೆಯುವ ಬಗ್ಗೆಯೇ ಅನುಮಾನ ಮೂಡಿಸುವಂತಿದೆ ಎಂದರು.
ಅಪರಾಧಿಗಳ ನೆರವಿಗೆ ನಿಂತಿರುವ ಯೋಗಿ ಆದಿತ್ಯನಾಥ್‌ರಂಥವರು ಕಾವಿ ಬಟ್ಟೆಗೆ ಕಳಂಕ. ಸಂವಿಧಾನಬದ್ದ ಸ್ಥಾನದಲ್ಲಿ ಮುಂದುವರಿಯಲು ಅರ್ಹತೆಯಿಲ್ಲದ ಅವರು ಕೂಡಲೇ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಆದಿ ದ್ರಾವಿಡ ಚಲವಾದಿ ಸಮಾಜದ ಅಧ್ಯಕ್ಷ ಡಾ.ಜಗನ್ನಾಥ್, ಬನ್ನಿಕೋಡು ವಾಗೀಶ್, ನಿಟ್ಟೂರು ಅಂಜನಪ್ಪ ಮುಂತಾದವರು ಹಾಜರಿದ್ದರು.