ಹರಿಹರ/ದಾವಣಗೆರೆ:ನಗರದ ಹೊರವಲಯದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದಲ್ಲಿ ಜ.14 ಮತ್ತು 15ರಂದು ಹರ ಜಾತ್ರಾ ಮಹೋತ್ಸವ, ಪಂಚಮಸಾಲಿ ರಾಜ್ಯ ಸಂಘದ ಬೆಳ್ಳಿಬೆಡಗು, ಅಕ್ಕಮಹಾದೇವಿ ವಚನ ವಿಜಯೋತ್ಸವ ಹಾಗೂ ತಮ್ಮ ಪೀಠಾರೋಹಣದ ದ್ವಿತೀಯ ವರ್ಷಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ವಚನಾನಂದ ಶ್ರೀಗಳು ಹೇಳಿದರು.
ಪಂಚಮಸಾಲಿ ಪೀಠದಲ್ಲಿ ಹರ ಜಾತ್ರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ - ದಾವಣಗೆರೆಯಲ್ಲಿ ಜಾತ್ರಾ ಮಹೋತ್ಸವ ಸುದ್ದಿ
ಹರಿಹರ ನಗರದ ಹೊರವಲಯದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದಲ್ಲಿ ಜ.14 ಮತ್ತು 15ರಂದು ಹರ ಜಾತ್ರಾ ಮಹೋತ್ಸವ ನಡೆಯಲಿದ್ದು,ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
![ಪಂಚಮಸಾಲಿ ಪೀಠದಲ್ಲಿ ಹರ ಜಾತ್ರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ fair](https://etvbharatimages.akamaized.net/etvbharat/prod-images/768-512-5685876-thumbnail-3x2-surya.jpg)
ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಸಚಿವ ಸಿ.ಸಿ ಪಾಟೀಲ್, ಜ.14ರ ಬೆಳಿಗ್ಗೆ 11:30ಕ್ಕೆ ವೀರರಾಣಿ ಕಿತ್ತೂರು ಚನ್ನಪ್ಪ ವೇದಿಕೆಯಲ್ಲಿ ಹರಜಾತ್ರಾ ಮಹೋತ್ಸವ ಹಾಗೂ ಯುವ ಸಮಾವೇಶಕ್ಕೆ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಚಾಲನೆ ನೀಡುವರು. ಬೆಂಗಳೂರು ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಸಾನಿಧ್ಯ ವಹಿಸುವರು, ಯುವ ಸಮಾವೇಶವನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಉದ್ಘಾಟಿಸುವರು ಎಂದು ತಿಳಿಸಿದ್ರು. ಸಂಕ್ರಾಂತಿ ಸಂಭ್ರಮ, ಕುಂಭಮೇಳ ಹಾಗೂ ಜಾನಪದ ಕಲಾಮೇಳದಲ್ಲಿ ಅಕ್ಕಮಹಾದೇವಿಯ ವಚನ ಕಟ್ಟುಗಳನ್ನು ಆನೆ ಅಂಬಾರಿಯಲ್ಲಿರಿಸಿ ಹರಿಹರೇಶ್ವರ ದೇವಸ್ಥಾನದಿಂದ ಶ್ರೀಕಾಂತ ಚಿತ್ರಮಂದಿರದವರೆಗೆ ಮೆರವಣಿಗೆ ನಡೆಸಲಾಗುವುದು. ಬೆಳವಡಿ ಮಲ್ಲಮ್ಮ ವೇದಿಕೆಯಲ್ಲಿ ನಡೆವ ಮಹಿಳಾ ಸಮಾವೇಶವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು ಎಂದು ತಿಳಿಸಿದ್ರು.
ಕಾರ್ಯಕ್ರಮದಲ್ಲಿ 3 ಲಕ್ಷಕ್ಕೂ ಅಧಿಕ ಜನ ಭಾಗವಹಿಸಲಿದ್ದು, ಜನರಿಗೆ ಆಸನ, ಊಟ, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಶುದ್ಧ ಕುಡಿಯುವ ನೀರು, ಮಜ್ಜಿಗೆ ವಿತರಣೆಯಿದೆ. ನಗರದ ಎಲ್ಲಾ ಕಲ್ಯಾಣ ಮಂಟಪಗಳಲ್ಲಿ ಜನರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. 8 ಎಲ್‌ಇಡಿ ವಾಲ್, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಮಠದ ಸುತ್ತಮುತ್ತಲ ಖಾಲಿ ಜಾಗಗಳಲ್ಲಿ ಸುಸಜ್ಜಿತ ವಾಹನ ನಿಲ್ದಾಣ ನಿರ್ಮಿಸಲಾಗಿದೆ. ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನಗಳನ್ನು ಸಜ್ಜುಗೊಳಿಸಲಾಗಿದೆ. ನಿರಂತರ ವಿದ್ಯುತ್‌ಗಾಗಿ ಪ್ರತ್ಯೇಕ ವಿದ್ಯುತ್ ಮಾರ್ಗ, ಪರಿವರ್ತಕ ಅಳವಡಿಸಲಾಗುತ್ತಿದೆ. ಮಾಧ್ಯಮದವರಿಗೆ ಮೀಡಿಯಾ ಸೆಂಟರ್ ತೆರೆಯಲಾಗುತ್ತಿದೆ ಎಂದು ಜಾತ್ರಾ ಸಿದ್ಧತೆ ಬಗ್ಗೆ ವಿವರಣೆ ನೀಡಿದ್ದಾರೆ.