ದಾವಣಗೆರೆ: ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಹಾದು ಹೋಗಿರುವ ಭದ್ರಾ ಉಪಕಾಲುವೆ ಮಳೆ ಹೊಡೆತಕ್ಕೆ ಕೊಚ್ಚಿ ಹೋಗಿತ್ತು. ಪರಿಣಾಮ ಸುಮಾರು ಐದು ಸಾವಿರ ಎಕರೆ ಪ್ರದೇಶಕ್ಕೆ ನೀರಿಲ್ಲದೇ ಬೆಳೆ ಒಣಗುವ ಹಂತ ತಲುಪಿತ್ತು. ಈ ಬಗ್ಗೆ ರೈತರು ಜಿಲ್ಲಾಡಳಿತ ನೀರಾವರಿ ಇಲಾಖೆಗೆ ಮನವಿ ಮಾಡಿದ್ದರೂ ಕೂಡ ಏನೂ ಪ್ರಯೋಜನವಾಗದಿದ್ದಾಗ ಹರಿಹರದ ಬಿಜೆಪಿ ಮುಖಂಡ ರೈತರಿಗೆ ಆಸರೆಯಾಗಿ ನಿಂತಿದ್ದಾರೆ.
ರೈತರ ಸಂಕಷ್ಟ ನೋಡಿ ತಮ್ಮ ಸ್ವಂತ ಹಣದಿಂದ 7 ಲಕ್ಷ ರೂಪಾಯಿ ಖರ್ಚು ಮಾಡಿ ಕೊಚ್ಚಿಹೋದ ಸೇತುವೆಗೆ ಕಾಯಕಲ್ಪ ಒದಗಿಸಿದ್ದಾರೆ. ಇದರಿಂದ ಅಂದಾಜು 15 ಕೋಟಿ ರೂಪಾಯಿ ಮೊತ್ತದ ಬೆಳೆ ನಷ್ಟವಾಗುವುದು ತಪ್ಪಿದಂತಾಗಿದೆ. ಇನ್ನೇನು ಭತ್ತ ನೀರಿಲ್ಲದೇ ಒಣಗಿ ಹೋಯಿತು ಎಂದು ತಲೆಮೇಲೆ ಕೈಹೊತ್ತು ಕುಳಿತಿದ್ದ ರೈತರಿಗೆ ತುಸು ನೆಮ್ಮದಿ ಸಿಕ್ಕಿದೆ.
ಭದ್ರಾ ಉಪಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪುವುದು ಒಂದು ತಿಂಗಳು ತಡವಾಗುವುದರಿಂದ ಅ ಭಾಗದ ರೈತರು ತಡವಾಗಿ ನಾಟಿ ಮಾಡುತ್ತಾರೆ. ಈ ಹಿನ್ನೆಲೆ, ಕಟಾವಿಗೆ ಇನ್ನೊಂದು ತಿಂಗಳು ಬೇಕೇ ಬೇಕು. ಮೇಲ್ಭಾಗದ ರೈತರಿಗೆ ನೀರು ತಲುಪಿದ ಒಂದು ತಿಂಗಳ ಬಳಿಕ ಇವರಿಗೆ ನೀರು ಸಿಗುವುದರಿಮದ ಇವರು ಸ್ವಲ್ಪ ತಡವಾಗಿಯೇ ಕೃಷಿ ಮಾಡುತ್ತಾರೆ. ಇದೇ ಕಾರಣಕ್ಕೆ ಇವರಿಗೆ ಸಂಕಷ್ಟ ತಪ್ಪಿದ್ದಲ್ಲ. ನೀರು ಬಾರದ ಕಾರಣ ರೈತರ ದುಗುಡ ಹೆಚ್ಚಿತ್ತು.