ದಾವಣಗೆರೆ:ಜಿಲ್ಲೆಯ ಹರಿಹರ ಪಟ್ಟಣದ ಆರೋಗ್ಯ ಮಾತೆಯ ಬೆಸಿಲಿಕಾ ಚರ್ಚ್ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು, ಸರ್ವಧರ್ಮಗಳ ಸಾಮರಸ್ಯ ಸಾರುವ ಎಲ್ಲಾ ಧರ್ಮೀಯರ ಆರಾಧ್ಯ ಕೇಂದ್ರವಾಗಿದೆ.ಕರ್ನಾಟಕದ ಮಧ್ಯಭಾಗದಲ್ಲಿರುವ ಹರಿಹರದಲ್ಲಿ ಆರೋಗ್ಯ ಮಾತೆಯ ಬೆಸಿಲಿಕಾ ಪುಣ್ಯಕ್ಷೇತ್ರವಿದೆ. ಏಸುವಿನ ತಾಯಿ ಮರಿಯಮ್ಮ ದರ್ಶನ ನೀಡಿದ ಕರ್ನಾಟಕದ ಏಕೈಕ ಪುಣ್ಯಭೂಮಿ ಎಂಬ ಪ್ರಖ್ಯಾತಿ ಹೊಂದಿದೆ. ಸತ್ಯಮ್ಮ ಎಂದು ಪ್ರಖ್ಯಾತಳಾಗಿ ದರ್ಶನ ನೀಡಿದ ಮೇರಿ ಮಾತೆಯ ಸ್ಮರಿಸಿ ಬಲಿ ಪೂಜೆ ನೆರವೇರಿಸುವುದು ಇಲ್ಲಿನ ವಿಶೇಷ.
ಬೆಸಿಲಿಕ ಎಂಬ ವಿಶ್ವಮಾನ್ಯತೆ ಸಿಗುವುದು ಅಷ್ಟು ಸುಲಭವಲ್ಲ. ಅಂದ ಹಾಗೆ ಈ ಶ್ರೇಷ್ಠ ಸ್ಥಾನ ನೀಡುವುದು ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್. ಕಳೆದ ವರ್ಷ ಈ ಪುಣ್ಯತಾಣಕ್ಕೆ 2019ರ ಸೆಪ್ಟಂಬರ್ 18 ರಂದು ಬೆಸಿಲಿಕಾ ಎಂಬ ಅಧಿಕೃತ ಮನ್ನಣೆ ಸಿಕ್ಕಿದೆ. ಸಾಮಾನ್ಯವಾಗಿ ಜನರು ನಂಬಿಕೆ, ಪಾಪ ಪರಿಹಾರ ಭಾವನೆ, ಅದ್ಭುತಗಳು ನಡೆಯುವ ತಾಣ ಎಂದು ಪರಿಗಣಿಸಿ ವಿಶ್ವಗುರು ಅವರೇ ಈ ಮಾನ್ಯತೆ ನೀಡಿದ ಬಳಿಕ ಈ ಬೆಸಿಲಿಕಾ ಮತ್ತಷ್ಟು ಪ್ರಖ್ಯಾತಿ ಹೊಂದಿದೆ.
ಆರೋಗ್ಯ ಮಾತೆ ಚರ್ಚ್ನ ಇತಿಹಾಸ ಏನು...?
1,800ರ ಆದಿಯಿಂದಲೂ ಹರಿಹರದಲ್ಲಿ ಈ ಚರ್ಚ್ ಇದೆ. ಬ್ರಾಹ್ಮಣನೊಬ್ಬನು ಸ್ನಾನ ಮಾಡುವಾಗ ಆಕಸ್ಮಿಕವಾಗಿ ತುಂಗಭದ್ರಾ ನದಿಗೆ ಬಿದ್ದು, ಸಾವಿನ ಭೀತಿಯಲ್ಲಿದ್ದರು. ಆಗ ಲೇಡಿ ಆಫ್ ಹೆಲ್ತ್‌ನ ತೇಲುವ ಪ್ರತಿಮೆ ನೋಡಿದರು. ಅದನ್ನು ಹಿಡಿದಿಟ್ಟುಕೊಂಡ ನಂತರ ಜೀವ ಉಳಿಯಿತು. ಮನೆಗೆ ತಲುಪಿದ ನಂತರ ಅವರ ಹೆಂಡತಿ ಮತ್ತು ಮಕ್ಕಳು ಲೇಡಿ ಆಫ್ ಹೆಲ್ತ್‌ನ ಪ್ರತಿಮೆಯನ್ನು ಸ್ಪರ್ಶಿಸಿದಾಗ ಕ್ಷಯ ಮತ್ತು ಪಾರ್ಶ್ವವಾಯು ಸೇರಿದಂತೆ ಇತರೆ ರೋಗಗಳಿಂದ ಗುಣಮುಖರಾದರು. ಬಳಿಕ ತಾಯಿಯ ಸೇವೆಯಲ್ಲಿ ನಿರತರಾದರು. ಬ್ರಾಹ್ಮಣ ನಿಧನರಾದ ಬಳಿಕ ಅವರ ಸಮಾಧಿ ಮಾಡಲಾಯಿತು. ಬಳಿಕ ಅದೇ ಮನೆಯನ್ನು ತುಂಗಭದ್ರಾ ನದಿಯ ದಡದಲ್ಲಿ ಚರ್ಚ್ ಆಗಿ ಪರಿವರ್ತಿಸಲಾಯಿತು ಎಂಬ ಇತಿಹಾಸ ಇದೆ.
ಮುಂಚಿನ ಮೈಸೂರು ರಾಜಮನೆತನ, ನಂತರ ಬ್ರಿಟಿಷರು ಈ ತಾಣ ಅಭಿವೃದ್ಧಿಗೆ ಮುಂದಾದರು. 1833 ರಲ್ಲಿ ಫ್ರಾ. ಬಿಗೋಟ್ ಅವರು ಹರಿಹರದಲ್ಲಿ ಪ್ರಾರ್ಥನಾ ಮಂದಿರವನ್ನು ನಿರ್ಮಿಸಿದರು ಎಂಬುದಕ್ಕೆ ಪುರಾವೆಗಳಿವೆ. ಬಳಿಕ ಈ ತಾಣ ಜನರ ಕಷ್ಟ ಪರಿಹರಿಸುವ ಸತ್ಯಮ್ಮ ತಾಯಿ ಮೇರಿ ಮಾತೆ ಅಂತಾನೇ ಫೇಮಸ್ ಆಯ್ತು.