ಕರ್ನಾಟಕ

karnataka

ಹಾಲಿ, ಮಾಜಿ ಶಾಸಕರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟ ಲಾಕ್​​ಡೌನ್ ಚರ್ಚಾ ಸಭೆ

By

Published : Jul 18, 2020, 9:24 PM IST

ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ತಮ್ಮ ತಮ್ಮ ಅಭಿಪ್ರಾಯ ಮಂಡಿಸಿದ ನಂತರ ಒಬ್ಬರ ಮೇಲೆ ಒಬ್ಬರು ಹರಿ ಹಾಯುತ್ತ ಮೈಮೇಲೆ ಏರಿ ಹೋಗುವ ಹಂತಕ್ಕೆ ಸ್ಥಿತಿ ತಲುಪಿತು. ಈ ಸಮಯದಲ್ಲಿ ಹಾಲಿ, ಮಾಜಿ ಶಾಸಕರ ಕಿತ್ತಾಟ ಶಮನ ಮಾಡಲು ಅಧಿಕಾರಿಗಳು ಮತ್ತು ವ್ಯಾಪಾರಸ್ಥರು ಮಧ್ಯ ಪ್ರವೇಶಿಸಬೇಕಾಯಿತು.

harihar lockdown
harihar lockdown

ಹರಿಹರ: ನಗರದಲ್ಲಿ ಲಾಕ್​​ಡೌನ್ ವಿಧಿಸುವ ಅಗತ್ಯತೆಯ ಕುರಿತು ಚರ್ಚಿಸಲು ತಾಲೂಕು ಆಡಳಿತ ಕರೆದಿದ್ದ ಸಮಾಲೋಚನೆ ಸಭೆ, ಹಾಲಿ ಮತ್ತು ಮಾಜಿ ಶಾಸಕರ ನಡುವೆ ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ತಮ್ಮವರಿಗಾಗಿ ವ್ಯಾಪಾರದ ಸಮಯ ನಿಗದಿ ಮಾಡುವ ವಿಷಯದಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಸಭೆಯಲ್ಲಿ ತೀವ್ರ ವಾಗ್ವಾದ ನಡೆಸಿದರು.

ಜಿಲ್ಲಾಡಳಿತದ ಆದೇಶದಂತೆ ತಾಲೂಕು ಆಡಳಿತ ನಗರದ ಎಸ್.ಜೆ.ವಿ.ಪಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಲಾಕ್ ಡೌನ್ ಕುರಿತು ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳ ಸಭೆ ಏರ್ಪಡಿಸಿತ್ತು. ಹಾಲಿ ಮತ್ತು ಮಾಜಿ ಶಾಸಕರು ವಾದ-ಪ್ರತಿವಾದ ಮಾಡುವ ಮೂಲಕ ಸಭೆಯಲ್ಲಿ ಗೊಂದಲದ ವಾತಾವರಣ ಮೂಡಿಸಿದರು.

ರಣಾಂಗಣವಾದ ಹರಿಹರ ಲಾಕ್​ಡೌನ್​ ಸಮಾಲೋಚನಾ ಸಭೆ

ಪ್ರಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಪಿ. ಹರೀಶ್, ದಾವಣಗೆರೆ-ಹರಿಹರ ಅವಳಿ ನಗರವಾಗಿದ್ದು ಅಲ್ಲಿ ಜಾರಿಯಾದ ನಿಯಮಗಳು ಇಲ್ಲಿಯೂ ಜಾರಿಯಾಗಲಿ. ನಗರದಲ್ಲಿ 8 ಗಂಟೆಯವರೆಗೆ ವ್ಯಾಪಾರಕ್ಕೆ ಅನುಮತಿ ನೀಡಿದರೆ ಅನುಕೂಲ. ಆದರೆ ಇದಕ್ಕೂ ಕಡಿಮೆ ಸಮಯ ನಿಗದಿ ಮಾಡಿದರೆ ಸಾರ್ವಜನಿಕರು ಖರೀದಿಗೆ ಅವಸರಪಟ್ಟು ಮುಗಿಬೀಳುತ್ತಾರೆ. ಅಲ್ಲದೆ ಪಕ್ಕದ ದಾವಣಗೆರೆಗೆ ಹೋಗಿ ವ್ಯಾಪಾರ ಮಾಡುವುದರಿಂದ ಕೊರೊನಾ ಹರಡಲು ಕಾರಣವಾದಂತಾಗುತ್ತದೆ ಎಂದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಎಸ್. ರಾಮಪ್ಪ, ದಾವಣಗೆರೆ ನಗರದಲ್ಲಿ ಕೊರೊನಾದಿಂದ ಪ್ರತಿನಿತ್ಯ ಸಾವು-ನೋವು ಸಂಭವಿಸುತ್ತಿವೆ. ನೀವು ಹೇಳಿದಂತೆ ಅನುಸರಿಸಿದರೆ ತಾಲೂಕು ಮುಂದಿನ ದಿನಗಳಲ್ಲಿ ಸ್ಮಶಾನವಾಗಿ, ಹೆಣಗಳನ್ನು ಮುಚ್ಚಲು ಜೆಸಿಬಿ ಬಳಸಬೇಕಾಗುತ್ತದೆ. ಕ್ಷೇತ್ರದ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸಮಯ ನಿಗದಿ ಮಾಡಬೇಕೇ ಹೊರತು, ಲಾಭದ ದೃಷ್ಟಿಯಿಂದಲ್ಲ. ಮನುಕುಲದ ಉಳಿವಿಗಾಗಿ ತೀರ್ಮಾನ ಮಾಡಬೇಕಾಗಿದೆ. ಈ ಸಮಯದಲ್ಲಿ ರಾಜಕೀಯ ಮಾಡಬಾರದು ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ತಮ್ಮ ತಮ್ಮ ಅಭಿಪ್ರಾಯ ಮಂಡಿಸಿದ ನಂತರ ಒಬ್ಬರ ಮೇಲೆ ಒಬ್ಬರು ಹರಿ ಹಾಯುತ್ತ ಮೈಮೇಲೆ ಏರಿ ಹೋಗುವ ಹಂತಕ್ಕೆ ಸ್ಥಿತಿ ತಲುಪಿತು. ಈ ಸಮಯದಲ್ಲಿ ಹಾಲಿ, ಮಾಜಿ ಶಾಸಕರ ಕಿತ್ತಾಟ ಶಮನ ಮಾಡಲು ಅಧಿಕಾರಿಗಳು ಮತ್ತು ವ್ಯಾಪಾರಸ್ಥರು ಮಧ್ಯ ಪ್ರವೇಶಿಸಬೇಕಾಯಿತು.

ಈ ಸಂದರ್ಭದಲ್ಲಿ ಗ್ರಾಮಾಂತರ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ಮಾತನಾಡಿ, ಇದು ಸರ್ಕಾರಿ ಸಭೆ, ಯಾರೂ ರಾಜಕೀಯ ಮಾಡಕೂಡದು. ಈ ರೀತಿಯ ಅನಾಗರಿಕತೆಯ ವರ್ತನೆ ಸರಿಯಲ್ಲ. ಸಭೆಯ ಅಧ್ಯಕ್ಷರು ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತಾರೆ. ಸಾರ್ವಜನಿಕರಿಗೆ ತಿಳುವಳಿಕೆ ಹೇಳುವ ನಿಮ್ಮ ನಡವಳಿಕೆ ಮಾದರಿಯಾಗಬೇಕು ಎಂದರು.

ವ್ಯಾಪಾರಸ್ಥರು ಮಾತನಾಡಿ, ಬಂಡವಾಳ ಹಾಕಿ ವ್ಯಾಪಾರ ಮಾಡುತ್ತಿರುವವರು ಮತ್ತು ಅಂದೇ ದುಡಿದು ಅಂದೇ ತಿನ್ನುವವರು ಇದ್ದೇವೆ. ಇದನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ತೀರ್ಮಾನ ಮಾಡಿ. ಬಡವರ ವಿಚಾರದಲ್ಲಿ ರಾಜಕೀಯ ಬೆರೆಸಬೇಡಿ ಎಂದು ಒತ್ತಾಯಿಸಿದರು.

ತಾಲೂಕಿನ ಸಾರ್ವಜನಿಕರು ಮತ್ತು ವ್ಯಾಪಾರಿಗಳ ಹಿತದೃಷ್ಟಿಯಿಂದ ಸೋಮವಾರದಿಂದ ಬೆಳಗ್ಗೆ ೫ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್. ರಾಮಪ್ಪ ಘೋಷಣೆ ಮಾಡಿದರು.

ಈ ಮಧ್ಯೆ ಮಾತನಾಡಿದ ಜೆಡಿಎಸ್ ಮುಖಂಡರು, ನಮ್ಮ ನಾಯಕ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಬರುವವರೆಗೂ ಸಭೆಯನ್ನು ನಡೆಸಬಾರದು. ಇಲ್ಲಿ ವ್ಯಾಪಾರಸ್ಥರ ಅಭಿಪ್ರಾಯಗಳು ಲೆಕ್ಕಕ್ಕೆ ಇಲ್ಲದಂತಾಗಿವೆ. ಇದೇ ರೀತಿ ನಡೆದರೆ ನಾವು ಈ ಸಭೆಯಿಂದ ಹೊರ ಹೋಗುತ್ತೇವೆ ಎಂದರೂ ಈ ಕಡೆ ಯಾರೂ ಗಮನ ನೀಡಲಿಲ್ಲ.

ಸಭೆಯಲ್ಲಿ ತಹಸೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮೀ, ಟಿಎಚ್ಓ ಚಂದ್ರಮೋಹನ್, ಸಿಪಿಐ ಶಿವಪ್ರಸಾದ್, ಪಿಎಸ್‌ಐ ರವಿಕುಮಾರ್ ಡಿ. ಹಾಗೂ ವಿವಿಧ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಒಟ್ಟಾರೆಯಾಗಿ ಇಂದಿನ ಸಭೆ ಹಾಲಿ ಹಾಗೂ ಮಾಜಿ ಶಾಸಕರ ಮಧ್ಯದ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು ಸ್ಪಷ್ಟವಾಗಿತ್ತು.

ABOUT THE AUTHOR

...view details