ದಾವಣಗೆರೆ: 2023 ಹೊಸ ವರ್ಷವನ್ನು ಅದ್ಧೂರಿ ಹಾಗೂ ಸಂಭ್ರಮದಿಂದ ಸ್ವಾಗತಿಸಲು ಬೆಣ್ಣೆ ದಾವಣಗೆರೆ ಜನತೆ ಸಜ್ಜಾಗಿದೆ. ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆ ನಗರದ ಬೇಕರಿಗಳಲ್ಲಿ ವಿಶಿಷ್ಟ ರೀತಿ ಕೇಕ್ ಗಳನ್ನು ತಯಾರಿಸಲಾಗಿದೆ.
ಹೌದು.. ನಗರದ ಸುಪ್ರಸಿದ್ಧವಾಗಿರುವ ಆಹಾರ್ 2000 ಬೇಕರಿ ಮಾಲೀಕ ರಮೇಶ್ ಅವರು ಸಹ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕೇಕ್ನಲ್ಲೇ ಮಂದಿರ, ಮಸೀದಿ, ಚರ್ಚ್ ನಂಥ ವಿಶಿಷ್ಟ ಆಕೃತಿಗಳನ್ನು ತಯಾರಿಸಿದ್ದು, ಇದರ ಮೂಲಕ ಸಮಾಜಕ್ಕೆ ಭಾವೈಕ್ಯತೆ ಸಂದೇಶದ ಅರಿವು ಮೂಡಿಸುತ್ತಿದ್ದಾರೆ.
ಗಮನ ಸೆಳೆದ ವಿವಿಧ ಕೇಕ್:ಹೊಸ ವರ್ಷಕ್ಕೆ ಆಹಾರ 2000 ಬೇಕರಿಯವರು ಸ್ವಲ್ಪ ವಿಭಿನ್ನವಾಗಿ ಕೇಕ್ ಮೇಳವನ್ನು ಹಮ್ಮಿಕೊಂಡಿದ್ದಾರೆ. ಈ ಬೇಕರಿಯಲ್ಲಿ 22 ವರ್ಷಗಳಿಂದ ಹೊಸ ವರ್ಷ ಸ್ವಾಗತಿಸಲು ವಿಶೇಷ ಕೇಕ್ ಗಳನ್ನು ತಯಾರಿಸಲಾಗುತ್ತಿದೆ. ಅದರಂತೆ ಈ ವರ್ಷವೂ ಸಹ ಸರ್ವ ಧರ್ಮ ಸಮನ್ವಯ ಸಾರುವ ಉದ್ದೇಶದಿಂದ ನಿರ್ಮಾಣ ಹಂತದ ಅಯೋಧ್ಯೆ ಶ್ರೀರಾಮ ಮಂದಿರ ಕೇಕ್, ದೆಹಲಿಯ ಜಾಮೀಯಾ ಮಸೀದಿ, ಮಂಗಳೂರಿನ ಸಂತೆಕಟ್ಟೆ ಚರ್ಚ್ ಅನ್ನು ಕೇಕ್ ನಲ್ಲಿ ಸೃಷ್ಟಿಸಿದ್ದು, ಜನರನ್ನು ಆಕರ್ಷಿಸುತ್ತಿವೆ.
ಕೇಕ್ನಲ್ಲಿ ಅರಳಿದ ಭಾವೈಕ್ಯತೆ: ಭಾವೈಕ್ಯತೆಯನ್ನು ಸಾರುವ ಮಂದಿರ ಮಸೀದಿ ಚರ್ಚ್ ಕೇಕ್ ಗಳನ್ನು ನೋಡಲು ಜನತೆ ಮುಗಿಬೀಳುತ್ತಿದ್ದಾರೆ. ಪ್ರಸ್ತುತವಾಗಿ ಕೆಲವೆಡೆ ಧರ್ಮ ದಂಗಲ್ ನಡೆಯುತ್ತಿದ್ದರೂ, ಮಾಲೀಕ ರಮೇಶ್ ಅವರು ಈ ಭಾವೈಕ್ಯತೆ ಸಾರುವ ಕೇಕ್ ಗಳನ್ನು ತಯಾರಿಸಿ ಸಮಾನತೆ ಸಾರಿದ್ದಾರೆ.
2000ದಿಂದ ಕೇಕ್ ಮೇಳ...2000 ಇಸವಿಯಲ್ಲಿ ಆರಂಭವಾಗಿದ್ದರಿಂದ 'ಆಹಾರ್ 2000' ಬೇಕರಿ ಎಂದು ನಾಮಕರಣ ಮಾಡಲಾಗಿತ್ತು. ಅಲ್ಲಿಂದ ಹಿಡಿದು ಪ್ರಸ್ತುತ 2023 ತನಕ ಪ್ರತಿ ವರ್ಷ ಒಂದೊಂದು ಕೇಕ್ ಗಳನ್ನು ತಯಾರು ಮಾಡಿ ಪ್ರದರ್ಶನಕ್ಕಿಡಲಾಗುತ್ತದೆ. ವಿಧಾನಸೌಧ, ಮೈಸೂರು ಅರಮನೆ, ಗೋಲ್ ಗುಂಬಜ್, ಬೇಲೂರು ಹಳೇಬೀಡು ದೇವಾಲಯ, ಏರಿಯಲ್ ಟವರ್, ತಿರುಪತಿ ದೇವಾಲಯ, ತಾಜ್ ಹೋಟೆಲ್, ಕ್ಲಿನ್ ಟವರ್, ಲಂಡನ್ ಬ್ರಿಡ್ಜ್ ಹೀಗೆ ಪ್ರತಿ ವರ್ಷ ಒಂದೊಂದು ಕಾನ್ಸೆಪ್ಟ್ ಗಳನ್ನು ಹಾಕಿಕೊಂಡು ಜಿಲ್ಲೆಯ ಜನರನ್ನು ಆಕರ್ಷಿಸುತ್ತಿದ್ದಾರೆ.