ಹರಿಹರ: ಕೊರೊನಾ ಹರಡುವಿಕೆ ತಡೆಯುವಲ್ಲಿ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಎಲ್. ಹನುಮಾನಾಯ್ಕ ಅವರನ್ನು ಹೊರತುಪಡಿಸಿದರೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶಾಸಕ ಎಸ್ ರಾಮಪ್ಪ ಅವರು ಹನುಮಾನಾಯ್ಕ್ ವಿರುದ್ಧ ನೇರ ಆರೋಪ ಮಾಡಿದರು.
ನಗರಸಭೆಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ನೇತೃತ್ವದಲ್ಲಿಂದು ಕೋವಿಡ್-19 ಕುರಿತಾದ ಸಾಧಕ-ಬಾಧಕಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಶಾಸಕ ಎಸ್. ರಾಮಪ್ಪ, ತಾಲೂಕಿನಲ್ಲಿ ಕೊರೊನಾ ವೈರಾಣು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೋಂಕು ತಡೆಯುವಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಶ್ರಮಪಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಹನುಮಾನಾಯ್ಕ್ ಕೊರೊನಾಗೆ ಹೆದರಿ ಒಂದು ದಿನವೂ ಉತ್ತಮ ಸೇವೆ ಸಲ್ಲಿಸಿಲ್ಲ ಎಂದು ಆರೋಪಿಸಿದರು.
ಕ್ಷೇತ್ರದಲ್ಲಿ ಜನರು ಮಹಾಮಾರಿ ಸೋಂಕಿಗೆ ಭಯಭೀತರಾಗಿದ್ದಾರೆ. ಅಂತಹವರಿಗೆ ಧೈರ್ಯ ತುಂಬಿ ಆತ್ಮಸ್ಥೈರ್ಯ ವೃದ್ಧಿಸುವ ಕೆಲಸ ಮಾಡಬೇಕು. ಆಸ್ಪತ್ರೆಯಲ್ಲಿನ ಕುಂದು-ಕೊರತೆಗಳನ್ನು ಆಲಿಸದೆ, ರೋಗಿಗಳ ನೋವನ್ನು ಕೇಳದೆ, ಕೊರೊನಾ ವೈರಾಣುವಿಗೆ ಭಯಪಟ್ಟು ಕೆಲಸಕ್ಕೆ ಸರಿಯಾಗಿ ಬರುತ್ತಿಲ್ಲ. ಅಲ್ಲದೆ, ಇತರೆ ವೈದ್ಯರ ಕಷ್ಟಗಳನ್ನು ಕೇಳದೆ ತಮ್ಮ ಪಾಡಿಗೆ ತಾವು ಇರುವುದನ್ನು ನೋಡಿದರೆ ಅವರ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ ಎಂದರು.
ಗುತ್ತೂರಿನಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ನೀರು ಹಾಗೂ ಇತರೆ ಮೂಲ ಸೌಲಭ್ಯಗಳ ಕೊರತೆ ಇದೆ. ಕೊರೊನಾ ಬಂದ ವ್ಯಕ್ತಿಯನ್ನು ಕರೆದುಕೊಂಡು ಹೋಗುವಾಗ ರಾಜ ಮರ್ಯಾದೆಯಿಂದ ಕರೆದುಕೊಂಡು ಹೋಗುತ್ತೀರಿ. ಆದರೆ, ಗುಣವಾಗಿ ಕಳಿಸುವಾಗ ಬೇಕಾಬಿಟ್ಟಿಯಾಗಿ ಕಳಿಸುತ್ತಿರುವುದು ನೋವಿನ ಸಂಗತಿ. ಇನ್ನು ಮುಂದಾದರೂ ಗೌರವಾನ್ವಿತವಾಗಿ ಕರೆತಂದು, ಸ್ಥಳೀಯರಿಗೆ ಹಾಗೂ ರೋಗಿಗಳ ಕುಟುಂಬಕ್ಕೆ ಆತ್ಮ ಸ್ಥೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ನಾವು ಅಧಿಕಾರಿಗಳು ಎಂಬ ಗತ್ತು ನಮ್ಮಲ್ಲಿ ಇರಬಾರದು. ಕೊರೊನಾ ವೈರಾಣುವನ್ನು ತಡೆಯುವುದು ನಮ್ಮ ಕರ್ತವ್ಯವಾಗಿದ್ದು, ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಭೇದಭಾವ ಮಾಡದೆ ವೈರಾಣು ತಡೆಯುವಲ್ಲಿ ಶ್ರಮವಹಿಸಬೇಕು. ಪಾಸಿಟಿವ್ ಕಾಣಿಸಿಕೊಂಡ ವ್ಯಕ್ತಿಗಳ ಟ್ರಾವೆಲ್ ಇತಿಹಾಸವನ್ನು ಕಡ್ಡಾಯವಾಗಿ ಸಂಗ್ರಹಿಸಿ, ಪ್ರಾಥಮಿಕ ಸಂಪರ್ಕಿತರನ್ನು ಹೋಂ ಕ್ವಾರೆಂಟ್‌ನಲ್ಲಿರಲು ಸೂಚಿಸಿ, ಸ್ವ್ಯಾಬ್ ಸಂಗ್ರಹಿಸಬೇಕು ಎಂದು ಸೂಚಿಸಿದರು.