ದಾವಣಗೆರೆ: ಮನೆಯಲ್ಲಿ ಕಿತ್ತು ತಿನ್ನುವ ಬಡತನದ ಮಧ್ಯೆ ವಿದ್ಯಾರ್ಥಿನಿ ಹಾಲಮ್ಮ ಐದು ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ. ತಾಯಿಯನ್ನು ಕಳೆದುಕೊಂಡ ಇವರು ಅಜ್ಜಿಯ ಆಸರೆಯಲ್ಲೇ ಬೆಳೆದು ಛಲ ಬಿಡದೆ ಓದಿ ಈ ಸಾಧನೆ ಮಾಡಿದ್ದಾರೆ. ಕೂಲಿ ಮಾಡುತ್ತಿದ್ದ ತಂದೆ ಕಳುಹಿಸಿದ ಹಣದಲ್ಲೇ ಶಿಕ್ಷಣ ಪೂರೈಸಿದ್ದಾರೆ. ವಿಶೇಷ ಅಂದ್ರೆ, ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ವಿದ್ಯಾರ್ಥಿನಿಯ ಅಜ್ಜಿ ಇಂದು ನೌಕರಿಯಿಂದ ನಿವೃತ್ತಿಯಾಗಿದ್ದು, ಉನ್ನತ ಶಿಕ್ಷಣ ಪಡೆಯಲು ಕಾರಣಕರ್ತಳಾದ ಅಜ್ಜಿಗೆ ಮೊಮ್ಮಗಳು ತನಗೆ ಸಿಕ್ಕ ಚಿನ್ನದ ಪದಕಗಳನ್ನು ಅರ್ಪಿಸಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ವೆಂಕಟೇಶ್ವರಪುರ ಕ್ಯಾಂಪ್ ನಿವಾಸಿಯಾದ ಹಾಲಮ್ಮ ದಾವಣಗೆರೆ ವಿವಿಯ ಹತ್ತನೇ ಘಟಿಕೋತ್ಸವದಲ್ಲಿ ಐದು ಚಿನ್ನದ ಪದಕಗಳನ್ನು ಸ್ವೀಕರಿಸಿದರು. ಎಂ.ಕಾಂ ವಿಭಾಗದಲ್ಲಿ ಇಡೀ ವಿವಿಗೆ ಮೊದಲ ರ‍್ಯಾಂಕ್ ಬಂದಿರುವ ಇವರು ತನ್ನ ತಂದೆ ಹಾಗು ಅಜ್ಜಿಗೆ ಕೀರ್ತಿ ತಂದಿದ್ದಾರೆ.
ತಂದೆ ಬಸಪ್ಪ ಕೂಲಿ ಮೂಲಕ ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಅದರಿಂದ ಉಳಿತಾಯವಾದ ಹಣವನ್ನು ಮಗಳ ಉನ್ನತ ಶಿಕ್ಷಣಕ್ಕಾಗಿ ವ್ಯಯಿಸಿದ್ದಾರೆ. 15 ವರ್ಷಗಳ ಹಿಂದೆ ಇವರು ತಾಯಿಯನ್ನು ಕಳೆದುಕೊಂಡಿದ್ದರು. ಆ ಬಳಿಕ ಅಜ್ಜಿಯ ಆಶ್ರಯದಲ್ಲೇ ಬೆಳೆದಿದ್ದಾರೆ. ಚನ್ನಬಸಮ್ಮ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಾ ಮೊಮ್ಮಗಳ ಉನ್ನತ ಶಿಕ್ಷಣಕ್ಕೆ ನೆರವಾಗಿದ್ದಾರೆ. ಹಾಲಮ್ಮ ಸರ್ಕಾರಿ ಬಿಸಿಎಂ ಹಾಸ್ಟೆಲ್ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಇದೀಗ ಕಠಿಣ ಪರಿಶ್ರಮಕ್ಕೆ ಫಲ ದೊರೆತಿದೆ.