ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಅಸಂಬದ್ಧವಾಗಿ ಮಾತನಾಡಿದರೆ ಬ್ರೇಕಿಂಗ್ ನ್ಯೂಸ್ ಆಗುತ್ತೆ ಎಂಬ ಕಾರಣಕ್ಕೆ ಮಾತನಾಡ್ತಾರೆ ಎಂದು ಹೇಳುವ ಮೂಲಕ ನೂತನ ಸಚಿವರಿಗೆ ಮಾಜಿ ಸಚಿವ ಹೆಚ್. ಆಂಜನೇಯ ಟಾಂಗ್ ನೀಡಿದ್ರು.
ತಾಲೂಕಿನ ರಾಜನಹಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನ ಸುಖಾಸುಮ್ಮನೆ ಕೆಣಕುತ್ತಾರೆ. ಅವರೆಲ್ಲಾ ಪೇಮೆಂಟ್ ಗಿರಾಕಿಗಳು. ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ನೂತನ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆಗೆ ಟಾಂಗ್ ನೀಡಿದರು.
ಹೆಚ್. ಆಂಜನೇಯ ಪ್ರತಿಕ್ರಿಯೆ ಬಿಜೆಪಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂಬ ಭಾವನೆ ನನ್ನದು. ಕುದುರೆ ವ್ಯಾಪಾರ ಮಾಡುವ ಮೂಲಕ ಸರ್ಕಾರಕ್ಕೆ ಆಪತ್ತು ಬಂದರೆ ಬಿಜೆಪಿಯವರು ಮತ್ತೆ ಇಪ್ಪತ್ತು ಶಾಸಕರನ್ನು ರಾಜೀನಾಮೆ ಕೊಡಿಸುವ ಕೆಲಸ ಮಾಡುತ್ತಾರೆ ಎಂದ ಅವರು, ಈ ಸರ್ಕಾರವೇ ಸಮತೋಲನದಿಂದ ಇಲ್ಲ. ಸಚಿವ ಸಂಪುಟ ವಿಸ್ತರಣೆಯಲ್ಲಿ ಪ್ರಾದೇಶಿಕ ಅಸಮತೋಲನದ ಬಗ್ಗೆ ಇನ್ನೇನು ಮಾತನಾಡಲು ಆಗುತ್ತೆ ಎಂದರು. ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ. ನನ್ನನ್ನು ಸೇರಿದಂತೆ ಪಕ್ಷದ ಎಲ್ಲಾ ನಾಯಕರ ಅಭಿಪ್ರಾಯ ಪಡೆಯಲಿದ್ದಾರೆ ಎಂದ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ನನಗೇನೂ ಗೊತ್ತಿಲ್ಲ ಎಂದರು.
ದಲಿತರು ಇಲ್ಲಿಯವರಲ್ಲ ಎಂಬ ಬಿ. ಎಲ್. ಸಂತೋಷ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಆಂಜನೇಯ, ನಾವೆಲ್ಲರೂ ಹೊರಗಿನಿಂದ ಬಂದವರಲ್ಲ. ಇಲ್ಲಿಯವರೇ. ಜಪಾನ್ನಿಂದ ಬಂದಿಲ್ಲ. ಇಂಥ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.