ದಾವಣಗೆರೆಯಲ್ಲಿ ಕ್ರಿಕೆಟ್ ಬ್ಯಾಟ್ ತಯಾರಿಕೆ... ದಾವಣಗೆರೆ:ಕ್ರಿಕೆಟ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ರಜೆ ಬಂತು ಅಂದ್ರೆ ಸಾಕು ಖಾಲಿ ಫೀಲ್ಡ್, ಹೊಲ, ಸ್ಟೇಡಿಯಂನಲ್ಲಿ ಆಟಗಾರರು ಕಾಣುತ್ತಾರೆ. ಆದರೆ ಈ ಖುಷಿ ಹಿಂದೆ ಹಲವು ಶ್ರಮಿಕರ ಶ್ರಮವಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಈ ಕ್ರೀಡೆಗೆ ದಾವಣಗೆರೆಯಲ್ಲೂ ಅಷ್ಟೇ ಪ್ರಾಮುಖ್ಯತೆ ಇದೆ. ಜೊತೆಗೆ ಇಲ್ಲಿ ಗುಜರಾತಿ ಕುಟುಂಬ ತಯಾರು ಮಾಡುವ ಬ್ಯಾಟ್ಗಳಿಗೂ ಭಾರೀ ಡಿಮ್ಯಾಂಡ್.
ದಾವಣಗೆರೆಯ ಪಿಬಿ ರಸ್ತೆಯ ಇಕ್ಕೆಲದಲ್ಲಿ ಹಲವು ವರ್ಷಗಳಿಂದ ಗುಜರಾತಿ ಕುಟುಂಬವೊಂದು ನೆಲೆಸಿದೆ. ಸದ್ದಿಲ್ಲದೆ ಬ್ಯಾಟ್‌ಗಳ ತಯಾರಿಕೆ ಮಾಡಿ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿದೆ. ಈ ಕಾಯಕದಲ್ಲಿ ಮಹಿಳೆಯರ ಶ್ರಮವೇ ಹೆಚ್ಚಿರುವುದು ವಿಶೇಷ.
ಪೂನಾ ಬೆಂಗಳೂರು ರಸ್ತೆಯಲ್ಲಿ ಒಂದು ಪುಟ್ಟ ಗೂಡಿನಲ್ಲಿ ಕಳೆದ 30 ವರ್ಷದಿಂದ ವಾಸ ಮಾಡುತ್ತಿರುವ ಕುಟುಂಬ ಮಳೆಗಾಲದಲ್ಲಿ ಮಾತ್ರ ಬೇರೆ ಕಡೆ ಹೋಗುತ್ತದೆ. ಇನ್ನುಳಿದ ದಿನವೆಲ್ಲ ಬ್ಯಾಟ್ ತಯಾರಿಕೆಯಲ್ಲಿ ತೊಡಗಿರುತ್ತದೆ. ರಮೇಶ್ ಎಂಬುವರು ಮನೆ ಯಜಮಾನನಾದರೆ, ಇವರಿಗೆ ಕಾಜಲ್ ಮತ್ತು ಷಜಾನ್ ಎಂಬ ಮಹಿಳೆಯರು ಕೆಲಸಕ್ಕೆ ಸಾಥ್ ನೀಡುತ್ತಾರೆ. ದಾವಣಗೆರೆ ನಗರ ಅಲ್ಲದೇ ಸುತ್ತಮುತ್ತಲ ಗ್ರಾಮದವರು ಬೀಸುತ್ತಿರುವ ಬ್ಯಾಟ್‌ಗಳು ಈ ಕಾರ್ಮಿಕರ ಕೈ ಕುಸುರಿಲ್ಲಿಯೇ ರೆಡಿಯಾಗಿದೆ. ಸಾಕಷ್ಟು ಬ್ಯಾಟ್‌ಗಳು ಕೈ ಕಸುಬಿನಲ್ಲಿ ತಯಾರಾಗಿ ವಿವಿಧ ಟೂರ್ನಿಯ ಭಾಗವಾಗಿವೆ.
ಕ್ರಿಕೆಟ್ ಬ್ಯಾಟ್ ತಯಾರಿಕೆಯಲ್ಲಿ ತೊಡಗಿಸಿಕೊಂಡ ಮಹಿಳೆ ಬದುಕು ಕಟ್ಟಿಕೊಟ್ಟ ಕಸುಬು: ಸಾವಿರಾರು ಕಿಮೀ ದೂರದಿಂದ ಆಗಮಿಸಿದ ರಮೇಶ್ ಅವರ ಕುಟುಂಬ ದಾವಣಗೆರೆಯಲ್ಲಿ ಬದುಕು ಕಟ್ಟಿಕೊಂಡಿರುವುದು ವಿಶೇಷ. ಸಂಸಾರವನ್ನು ಸಾಗಿಸಲು ಚಿಕ್ಕದೊಂದು ಗುಡಿಸಲು, ಕೈ ಕಸುಬಿದ್ದರೇ ಸಾಕು ಪ್ರಪಂಚವನ್ನೇ ಮನೆಯನ್ನಾಗಿ ಮಾಡಿಕೊಂಡು ಎಲ್ಲಿ ಬೇಕಾದರೂ ಬದುಕಬಹುದು ಎಂಬುದಕ್ಕೆ ಇವರು ಉತ್ತಮ ಉದಾಹರಣೆಯಾಗಿದ್ದಾರೆ. ಅದಕ್ಕಾಗಿ ಸುಮಾರು 1300 ಕಿ.ಮೀ ದೂರದಿಂದ ಬಂದು ಇಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಮೂಲತಃ ಗುಜರಾತ್ ನವರಾಗಿರುವ ಇವರು ಬ್ಯಾಟ್‌ಗಳನ್ನು ತಯಾರಿಸಿ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹೊಸದುರ್ಗ, ಶಿವಮೊಗ್ಗ ಸೇರಿದಂತೆ ಇತರೆ ಊರುಗಳಿಗೆ ಹೋಲ್‌ಸೇಲ್ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.
ಜಾಲರ್ ಮರದಿಂದ ಬ್ಯಾಟ್ ತಯಾರಿ:ಬೇಸಿಗೆಯಲ್ಲಿ ಹೆಚ್ಚು ಬ್ಯಾಟ್ ತಯಾರಿಸಿ ಮಾರಾಟ ಮಾಡುತ್ತಾರೆ. ಇವರು ತಯಾರಿಸುವ ಬ್ಯಾಟ್ಗಳಿಗೆ ಹೆಚ್ಚು ಬೇಡಿಕೆಯಿದೆ. ಕ್ರಿಕೆಟ್ ಬ್ಯಾಟ್ ತಯಾರು ಮಾಡುವ ಸಾಮಗ್ರಿಗಳನ್ನು ಗುಜರಾತ್‌ನಿಂದ ತರಿಸಲಾಗುತ್ತದೆ. ಜಾಲರ್ ಎಂಬ ಮರದಿಂದ ಬ್ಯಾಟ್‌ಗಳನ್ನು ತಯಾರಿಸಿಕೊಡುತ್ತಾರೆ. ಪ್ರತಿದಿನ ಬೆಳಗ್ಗೆ 6 ರಿಂದ ಆರಂಭವಾಗುವ ಇವರ ಕೆಲಸ ತಡರಾತ್ರಿವರೆಗೆ ನಡೆಯುತ್ತದೆ.
ಕ್ರಿಕೆಟ್ ಬ್ಯಾಟ್ ತಯಾರಿಕೆಯಲ್ಲಿ ತೊಡಗಿಸಿಕೊಂಡ ರಮೇಶ್ "ದಿನಕ್ಕೆ 50 ಬ್ಯಾಟ್‌ಗಳನ್ನು ಮಾಡುತ್ತೇವೆ. ಆದರೆ ಮಾಡಿದ್ದೆಲ್ಲವೂ ಮಾರಾಟವಾಗುವುದಿಲ್ಲ. ಒಂದು ಬ್ಯಾಟ್ ಮಾಡಲು ಮರದ ವೆಚ್ಚ, ಕೂಲಿ ಸೇರಿ 150 ರೂ. ತಗುಲುತ್ತದೆ. ಅವುಗಳನ್ನು 200 ರಿಂದ 500 ರೂ.ಗಳಿಗೆ ಮಾರಾಟ ಮಾಡುತ್ತೇವೆ. ಒಂದು ದಿನಕ್ಕೆ ಸಾವಿರ ರೂ. ಸಿಗುತ್ತದೆ" ಎನ್ನುತ್ತಾರೆ ಮನೆ ಯಜಮಾನ ರಮೇಶ್. ಕೌಶಲವಿದ್ದು, ದುಡಿಯುವ ಮನಸ್ಸಿದ್ದರೆ ಜಗತ್ತಿನ ಎಲ್ಲಿಯೇ ಇದ್ದರೂ ಬದುಕು ಸಾಗಿಸಬಹುದು ಎಂಬುದಕ್ಕೆ ಕುಟುಂಬ ಸಾಕ್ಷಿಯಾಗಿದೆ.
ಇದನ್ನೂ ಓದಿ:ವಿಲ್ಲೋ ಮರದ ಬದಲು ಬಿದಿರಿನಲ್ಲಿ ಕ್ರಿಕೆಟ್ ಬ್ಯಾಟ್ ತಯಾರಿಸುವುದು ತುಂಬಾ ಅಗ್ಗ: ಯುಕೆ ಸಂಶೋಧಕರು