ದಾವಣಗೆರೆ: ಜಿಲ್ಲೆಯ 88 ಗ್ರಾ.ಪಂ. ಗಳ ಮೊದಲ ಹಂತದ ಚುನಾವಣೆ ಆರಂಭವಾಗಿದೆ. ದಾವಣಗೆರೆ ತಾಲೂಕಿನ ಹದಡಿ ಗ್ರಾಮಲ್ಲಿ ಬೆಳಗ್ಗೆಯಿಂದಲೇ ಬಿರುಸಿನ ಮತದಾನ ಆರಂಭವಾಗಿದ್ದು, ಮತದಾರರನ್ನು ಸೆಳೆಯಲು ಮತಗಟ್ಟೆ ಬಳಿಯೇ ನಿಂತಿದ್ದ ಅಭ್ಯರ್ಥಿಗಳ ಪರ ಪ್ರಚಾರಕರ ಮಧ್ಯೆ ಜಗಳವಾಗಿದೆ.
ಮತಗಟ್ಟೆ ಎದುರೇ ಎರಡು ಗುಂಪುಗಳ ಮಧ್ಯೆ ಗಲಾಟೆ
11:15 December 22
ದಾವಣಗೆರೆ ತಾಲೂಕಿನ ಹದಡಿ ಗ್ರಾಮದಲ್ಲಿ ಮತಗಟ್ಟೆ ಮುಂಭಾಗವೇ ಎರಡು ಗುಂಪುಗಳ ನಡುವೆ ಮಾರಾಮರಿ ನಡೆದಿದೆ. ಹೆಬ್ಬಾಳದ ಮತಗಟ್ಟೆಯಲ್ಲಿ ಮತದಾರರ ಪಟ್ಟಿಯಲ್ಲಿ ಆಗಿರುವ ಗೊಂದಲ ಸರಿಪಡಿಸುವಂತೆ ಮತದಾರರು ಮತಗಟ್ಟೆಗೆ ನುಗ್ಗಿದಾಗ ಈ ಘಟನೆ ನಡೆದಿದೆ.
ಮತದಾರರನ್ನು ಸೆಳೆಯುವ ವೇಳೆ ಹದಡಿ ಮತಗಟ್ಟೆ ಮುಂಭಾಗದಲ್ಲೇ ಎರಡು ಗುಂಪುಗಳ ನಡುವೆ ಜಗಳ ಆಗಿದ್ದು, ಪರಸ್ಪರ ಒಬ್ಬರಿಗೊಬ್ಬರು ಎಳೆದಾಡಿಕೊಂಡಿದ್ದಾರೆ. ಹದಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆಯ ಮುಂಭಾಗ ಜಗಳವಾಗಿದೆ.
ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಇದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ಎರಡು ಗುಂಪುಗಳ ಮಧ್ಯೆ ಪ್ರವೇಶಿಸಿದ ಪೊಲೀಸರು ಸಮಾಧಾನ ಪಡಿಸಿದ್ದಾರೆ. ಬಳಿಕ ಮುಂಜಾಗ್ರತ ಕ್ರಮವಾಗಿ ಹದಡಿ ಗ್ರಾಮದಲ್ಲಿ ಡಿ ಆರ್ ತುಕಡಿ ನಿಯೋಜಿಸಲಾಗಿದೆ.
ಹೆಬ್ಬಾಳದ ಮತಗಟ್ಟೆಯಲ್ಲೂ ವಾಗ್ವಾದ:
ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾ.ಪಂ.ಯ ಮತದಾರರ ಪಟ್ಟಿಯಲ್ಲಿ ಆಗಿರುವ ಗೊಂದಲ ಸರಿಪಡಿಸುವಂತೆ ಮತದಾರರು ಮತಗಟ್ಟೆಗೆ ನುಗ್ಗಿದರು. ಬಳಿಕ ಇದು ಚುನಾವಣಾ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಕಾರಣವಾಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.