ದಾವಣಗೆರೆ: ಸರ್ಕಾರ ನೀಡಿದ ಗ್ಯಾರಂಟಿಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ತನಕ, ಸದನದ ಹೊರಗೆ ಹಾಗೂ ಒಳಗೆ ನಿರಂತರ ಹೋರಾಟ ಮಾಡಲಾಗುವುದು ಎಂದು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಎರಡು ಗ್ಯಾರಂಟಿಗಳನ್ನು ಬಿಟ್ರೇ ಯಾವುದೇ ಗ್ಯಾರಂಟಿಗಳನ್ನು ಜಾರಿ ಮಾಡಿಲ್ಲ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಅವರು ಆ ವಿಚಾರವಾಗಿ ತನಿಖೆ ಮಾಡುತ್ತೇವೆ ಎಂದು ಹೇಳಿರುವುದನ್ನು ಸ್ವಾಗತಿಸುತ್ತೇನೆ ಎಂದರು.
ಇನ್ನು, ವಿಪಕ್ಷ ನಾಯಕನ ಆಯ್ಕೆ ಇಂದು ಅಥವಾ ನಾಳೆ ಆಗಲಿ ಎಂದ ಅವರು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಇಲ್ಲ. ಬಿತ್ತನೆ ನೂರಕ್ಕೆ ಶೇ.10% ಪ್ರಾರಂಭವಾಗಿಲ್ಲ, ಹೀಗಾಗಿ ತಕ್ಷಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯ ಮಾಡುತ್ತೇನೆ. ಬರಗಾಲ ಎಂದು ಘೋಷಿಸಲು ಸರ್ಕಾರ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ, ಸದನ ಒಳಗೆ ನಮ್ಮ ನಾಯಕರು ಹೋರಾಟ ಮಾಡುತ್ತಾರೆ. ಭೀಕರ ಬರಗಾಲದಿಂದ ರಾಜ್ಯದಲ್ಲಿ ಕೆರೆ ಕಟ್ಟೆ, ಜಲಾಶಯಗಳು ಬತ್ತಿಹೋಗಿರುವ ಈ ಸಂದರ್ಭದಲ್ಲಿ ಕಣ್ಮುಚ್ಚಿಕೊಂಡು ಕುಳಿತಿರುವ ಸರ್ಕಾರ ಈಗಲಾದರೂ ಕಣ್ಣು ತೆರೆದು ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಬರಗಾಲ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜಕಾರಣದಲ್ಲಿ ಯಾವ ಸಂದರ್ಭದಲ್ಲಿ ಏನು ಆಗುತ್ತದೆ ಎಂದು ಗೊತ್ತಿಲ್ಲ - ಬೊಮ್ಮಾಯಿ: ಇನ್ನು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸರ್ಕಾರ ಹೇಳಿದ್ದೊಂದು, ಮಾಡಿದ್ದೊಂದು. ಏನೂ ಐದು ದೋಖಾಗಳನ್ನು ಕೊಟ್ಟಿದೆ, ಇದರ ಬಗ್ಗೆ ವಿವರವಾಗಿ ಚರ್ಚೆ ಮಾಡಲು ಅವಕಾಶ ಸಿಗುತ್ತಿದೆ. ಹೀಗಾಗಿ ಸದನ ಒಳಗೆ ತೀವ್ರವಾದ ಚರ್ಚೆ ಮಾಡುತ್ತೇವೆ ಮತ್ತು ಸದನದ ಹೊರಗೆ ಸನ್ಮಾನ್ಯ ಯಡಿಯೂರಪ್ಪ ಅವರು ಹೋರಾಟ ಮಾಡುತ್ತಾರೆ. ವಿಪಕ್ಷ ನಾಯಕನ ಆಯ್ಕೆ ಇಂದು ಅಥವಾ ನಾಳೆಯಾಗುತ್ತದೆ ಎಂದರು.
ಮಹಾರಾಷ್ಟದ ಇತ್ತೀಚಿನ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಯಾವ ಸಂದರ್ಭದಲ್ಲಿ ಏನು ಆಗುತ್ತದೆ ಎಂದು ಗೊತ್ತಿಲ್ಲ. ಇದು ಇವತ್ತಿನದ್ದಲ್ಲ, ಬಹಳ ವರ್ಷದಿಂದ ನಡೆದಿರುವಂತಹದ್ದು. ರಾಜ್ಯದಲ್ಲೂ ಈ ರೀತಿ ಆಗಿರುವ ಸಂಗತಿಗಳನ್ನು ನಾನು ಹಲವಾರು ಬಾರಿ ನೋಡಿದ್ದೇನೆ. ರಾಜಕಾರಣದಲ್ಲಿ ಹೀಗೆ ಆಗುತ್ತೇ, ಹಾಗೇ ಅಗುತ್ತೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಎಲ್ಲವೂ ಸಾಧ್ಯತೆ ಇದೆ ಎಂದು ಹೇಳಿದರು.