ಹೊರಗುತ್ತಿಗೆ ನೌಕರರ ಪ್ರತಿಭಟನೆ ದಾವಣಗೆರೆ :ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿ ನಿಲಯಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರ ಬದುಕು ಅತಂತ್ರವಾಗಿದೆ. ನೂರಾರು ನೌಕರರಿಗೆ ಕಳೆದ ಏಳು ತಿಂಗಳಿಂದ ವೇತನವಾಗದೆ ಜೀವನ ದುಸ್ತರವಾಗಿದೆ. ವೇತನಕ್ಕಾಗಿ ಇದೀಗ ಬೀದಿಗಿಳಿದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ದಾವಣಗೆರೆ ತಾಲೂಕಿನ ಒಟ್ಟು 500 ರಿಂದ 600 ನೌಕರರಿಗೆ ಸರ್ಕಾರ ವೇತನ ಪಾವತಿಸಿಲ್ಲ. ಏಳು ತಿಂಗಳ ವೇತನಕ್ಕಾಗಿ ನೌಕರ ಸಮುದಾಯ ಕಾದು ಕೂತಿದೆ. ನೌಕರರು ವೇತನಕ್ಕಾಗಿ ಇಲಾಖೆಗೆ ಅಲೆದು ಸುಸ್ತಾಗಿದ್ದಾರೆ. ಹೀಗಾಗಿ, ವಿದ್ಯಾರ್ಥಿ ನಿಲಯಗಳಲ್ಲಿ ಅಡುಗೆ ಮಾಡದೇ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ನಗರದ ಬೂದಾಳ್ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಮುಷ್ಕರ ಹೂಡಿದ ನೌಕರರು ಅಧಿಕಾರಿಗಳು ಸ್ಥಳಕ್ಕಾಗಮಿಸುವಂತೆ ಪಟ್ಟು ಹಿಡಿದರು.
ಮಾಹಿತಿ ತಿಳಿದು ಪ್ರತಿಭಟನಾ ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ. ನಾಗರಾಜ್, ನಾಲ್ಕು ತಿಂಗಳ ಸಂಬಳವನ್ನು ಒಂದು ವಾರದ ಬಳಿಕ ನೌಕರರ ಖಾತೆಗೆ ಜಮೆ ಮಾಡುವ ಆಶ್ವಾಸನೆ ನೀಡಿದರು. ಈ ವೇಳೆ ಮಾತನಾಡಿದ ಮೀನಾಕ್ಷಮ್ಮ, ಈ ಸಂಬಳ ನಂಬಿ ಲೋನ್ ತೆಗೆದುಕೊಂಡಿದ್ದೀವಿ. ಇದೀಗ ಸಂಬಳ ಇಲ್ಲದೇ ಲೋನ್ ಕಟ್ಟಲಾಗುತ್ತಿಲ್ಲ. ಸಾಲಗಾರರು ನಮ್ಮ ಮನೆಗೆ ಬೀಗ ಜಡಿದಿದ್ದಾರೆ. ನಾವು ಬೀದಿ ಪಾಲಾಗಿದ್ದೇವೆ ಎಂದು ಅಳಲು ತೋಡಿಕೊಂಡರು. ಅಧಿಕಾರಿ ನೀಡಿದ ಭರವಸೆಯಿಂದ ನೌಕರರು ತಮ್ಮ ಮುಷ್ಕರವನ್ನು ಹಿಂಪಡೆದರು.
"ನಮ್ಮ ಹೊರಗುತ್ತಿಗೆ ನೌಕರರು ಏಳು ತಿಂಗಳ ವೇತನ ನೀಡಿಲ್ಲ ಎಂದು ಪ್ರತಿಭಟನೆ ನಡೆಸಿದರು. ನಾಲ್ಕು ತಿಂಗಳ ಸಂಬಳ ಕೊಡಲು ವ್ಯವಸ್ಥೆ ಮಾಡಿದ್ದೇವೆ. ಉಳಿದ ಮೂರು ತಿಂಗಳ ವೇತನವನ್ನೂ ನೀಡುತ್ತೇವೆ. ಪಿಎಫ್, ಇಎಸ್ಐ ಹಣ ಕಡಿತ ಆಗಿದೆಯೋ ಇಲ್ವೋ ಎಂಬುದರ ಬಗ್ಗೆಯೂ ಮಾಹಿತಿ ಸಂಗ್ರಹಿಸಬೇಕಿದೆ" ಎಂದರು.
ಇದನ್ನೂ ಓದಿ:ನಮ್ಮ ಪಕ್ಷದ ಶಾಸಕ ತಪ್ಪು ಮಾಡಿದ್ದು, ಮುಲಾಜಿಲ್ಲದೆ ಕ್ರಮ ಕೈಗೊಂಡಿದ್ದೇವೆ: ಪ್ರಹ್ಲಾದ್ ಜೋಶಿ