ದಾವಣಗೆರೆ:ಹಿಂದೂ ಮಹಾಗಣಪತಿ ಶೋಭಾಯಾತ್ರೆ ಅದ್ಧೂರಿಯಾಗಿ, ಶಾಂತಿಯುತವಾಗಿ ನಡೆಯಿತು. ಶೋಭಾಯಾತ್ರೆಯಲ್ಲಿ ಅಪರಿಚಿತ ಯುವಕನೋರ್ವ ನಾಥೂರಾಮ್ ಗೋಡ್ಸೆ ಫ್ಲೆಕ್ಸ್ ಪ್ರದರ್ಶಿಸಿದ್ದು, ಆತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಘಟನೆ ನಿನ್ನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶನಿವಾರ ಬೆಳಿಗ್ಗೆ 10.30ರ ಸುಮಾರಿಗೆ ಆರಂಭವಾದ ಶೋಭಾಯಾತ್ರೆಯಲ್ಲಿ ಸಾಕಷ್ಟು ಯುವಕರು ಸೇರಿದ್ದರು. ಯಾತ್ರೆ ಗಣೇಶನ ಪೆಂಡಾಲ್ ಬಿಟ್ಟು ಸ್ವಲ್ಪ ಮುಂದೆ ಸಾಗಿ ದಾವಣಗೆರೆ ನಗರದ ಎವಿಕೆ ಕಾಲೇಜು ರಸ್ತೆಗೆ ಬರುತ್ತಿದ್ದಂತೆ ಅಪರಿಚಿತ ಯುವಕ ನಾಥೂರಾಮ್ ಗೋಡ್ಸೆ ಚಿತ್ರವಿರುವ ಫ್ಲೆಕ್ಸ್ ಪ್ರದರ್ಶಿಸಿದ್ದಾನೆ.
ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಬಡಾವಣೆ ಪೊಲೀಸ್ ಠಾಣೆಯ ಪಿಐ ಮಲ್ಲಮ್ಮ ಚೋಬೆ, "ಈಗಾಗಲೇ ಯುವಕನ ಮೇಲೆ ಪ್ರಕರಣ ದಾಖಲಾಗಿದೆ. ಆತನ ಗುರುತು ಇನ್ನೂ ಪತ್ತೆಯಾಗಿಲ್ಲ. ಅಪರಿಚಿತನಾಗಿದ್ದರಿಂದ ಹುಡುಕುತ್ತಿದ್ದೇವೆ" ಎಂದು ಮಾಹಿತಿ ನೀಡಿದರು.