ಕರ್ನಾಟಕ

karnataka

ETV Bharat / state

ಮಾಡಾಳ್ ವಿರೂಪಾಕ್ಷಪ್ಪ ಮೇಲೆ ಲೋಕಾಯುಕ್ತ ದಾಳಿ ಮಾಡಿಸಿದ್ದು ನಾನಲ್ಲ : ಸಿದ್ದೇಶ್ವರ್

ಮಾಡಾಳ್ ವಿರೂಪಾಕ್ಷಪ್ಪ ಮೇಲಿನ ಲೋಕಾಯುಕ್ತ ದಾಳಿಯನ್ನು ಮಾಡಿಸಿದ್ದು ನಾನಲ್ಲ ಎಂದು ಸಂಸದ ಜಿ ಎಂ ಸಿದ್ದೇಶ್ವರ್​ ಪುನರುಚ್ಚರಿಸಿದ್ದಾರೆ.

mp
ಸಂಸದ ಜಿಎಂ ಸಿದ್ದೇಶ್ವರ್

By

Published : Apr 24, 2023, 4:52 PM IST

Updated : Apr 24, 2023, 5:53 PM IST

ಜಿ ಎಂ ಸಿದ್ದೇಶ್ವರ್

ದಾವಣಗೆರೆ:ಮಾಡಾಳ್ ವಿರೂಪಾಕ್ಷಪ್ಪ ಮೇಲೆ ನಾನೇ ಲೋಕಾಯುಕ್ತ ದಾಳಿ ಮಾಡಿಸಿದ್ದೇನೆಂದು ತಪ್ಪು ತಿಳಿದು ಬೇಜಾರಾಗಿದ್ದಾರೆ. ನಾನು ಲೋಕಾಯುಕ್ತ ದಾಳಿ ಮಾಡಿಸುವಷ್ಟು ಪ್ರಭಾವಿಯಲ್ಲ ಎಂದು ಜಿ ಎಂ ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ. ನಾನು ಅಷ್ಟು ಪ್ರಭಾವಿಯಾಗಿದ್ದರೆ ನನ್ನ ತಮ್ಮನ ಮೇಲೆ ಎರಡು ದಾಳಿ ಆದವು. ಅವುಗಳನ್ನು ನಾನು ತಡೆಯಬಹುದಿತ್ತು. ಮಾಡಾಳ್ ವಿರೂಪಾಕ್ಷಪ್ಪನಿಗೆ ಬುದ್ಧಿ ಕಮ್ಮಿ ಇದೆ, ಹೀಗಾಗಿ ಅವರು ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ಹಿಡಿದು ಕೂತಿದ್ದಾರೆ‌ ಎಂದು ಜಿ ಎಂ ಸಿದ್ದೇಶ್ವರ್ ಕುಟುಕಿದರು.

ನಗರದ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿರೂಪಾಕ್ಷಪ್ಪ ನನ್ನ ಸ್ನೇಹಿತ. ನಾನು ಅವರ ಮೇಲೆ ಲೋಕಾಯುಕ್ತ ದಾಳಿ ಮಾಡಿಸಿಲ್ಲ ಎಂದು ಜಿ ಎಂ ಸಿದ್ದೇಶ್ವರ್ ಮತ್ತೊಮ್ಮೆ ಸ್ಪಷ್ಟನೆ ನೀಡಿದರು. ಮಾಡಾಳ್ ವಿರುದ್ಧ ರಾಜ್ಯ ಹಾಗೂ ಕೇಂದ್ರದ ನಾಯಕರು ಕ್ರಮ ಕೈಗೊಳ್ಳುತ್ತಾರೆ. ಈಗಾಗಲೇ ಶಾಸಕ‌ ಮಾಡಾಳ್ ವಿರೂಪಾಕ್ಷಪ್ಪ ತಮ್ಮ ಪುತ್ರನನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ ಎಂದರು.

ಇನ್ನು ದಾವಣಗೆರೆಯಲ್ಲಿ ಮಾಯಕೊಂಡ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರನ್ನು ಕರೆಸಿ ಮಾತನಾಡಿದ್ದೇವೆ. ಅವರು ಇವತ್ತು ನಾಮಪತ್ರ ವಾಪಸ್​ ತೆಗೆದುಕೊಳ್ಳಲಿದ್ದಾರೆ. ಇನ್ಯಾವ ಕ್ಷೇತ್ರದಲ್ಲಿ ಯಾವುದೇ ಬಂಡಾಯ ಇಲ್ಲ. ಬಿಜೆಪಿ ಎಂಟು ಕ್ಷೇತ್ರಗಳಲ್ಲೂ ಗೆಲ್ಲುತ್ತದೆ. ನಾನು ಪ್ರಚಾರಕ್ಕೆ ಹೋದಲ್ಲೆಲ್ಲಾ ಬಿಜೆಪಿಗೆ ವೋಟು ಕೊಡುವ ಭರವಸೆ ಸಿಗುತ್ತಿದೆ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಮಾಹಿತಿ ನೀಡಿದರು.

ಏನಿದು ಮಾಡಾಳ್​ ಲಂಚ ಪ್ರಕರಣ? :ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್​ಡಿಎಲ್‌) ರಾಸಾಯನಿಕ ವಸ್ತುಗಳನ್ನು ಪೂರೈಸುವ ಟೆಂಡರ್ ನೀಡಲು ಆಗ ಕೆಎಸ್​ಡಿಎಲ್‌ ಅಧ್ಯಕ್ಷರಾಗಿದ್ದ ಹಾಗೂ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಪ್ರಶಾಂತ್ ಮಾಡಾಳ್ ಟೆಂಡರ್ ಆಕಾಂಕ್ಷಿಯೊಬ್ಬರಿಂದ 80 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟು 40 ಲಕ್ಷ ರೂ. ಸ್ವೀಕರಿಸುತ್ತಿದ್ದಾಗ ಅವರ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಪ್ರಕರಣದಲ್ಲಿ ಮಾಡಾಳ್​ ವಿರೂಪಾಕ್ಷಪ್ಪ ಮೊದಲ ಆರೋಪಿಯಾಗಿದ್ದರು.

ನಂತರ ಶಾಸಕರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿತ್ತು. ಆ ಬಳಿಕ ಪ್ರಕರಣದ ಮೊದಲ ಆರೋಪಿಯಾಗಿರುವ ಅರ್ಜಿದಾರರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವುದು ಅತ್ಯಗತ್ಯವಾಗಿದೆ ಎಂದು ನ್ಯಾಯಾಲಯ ನಿರೀಕ್ಷಣಾ ಜಾಮೀನು ವಜಾಗೊಳಿಸಿತ್ತು. ನಿರೀಕ್ಷಣಾ ಜಾಮೀನು ವಜಾಗೊಂಡ ದಿನವೇ ಮಾಡಾಳ್​ ಅವರ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದರು. ಆದರೆ ಮನೆಯಲ್ಲಿ ಮಾಡಾಳ್​ ಅವರು ಇರಲಿಲ್ಲ.

ಆ ದಿನದಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರು ವಿವಿಧ ಕಾಮಗಾರಿಗಳನ್ನು ಉದ್ಘಾಟನೆ ಮಾಡಿ ಅರ್ಜಿ ವಜಾಗೊಂಡಿದೆ ಎಂಬ ಮಾಹಿತಿ ತಿಳಿದ ನಂತರ ಅಲ್ಲಿಂದ ಬೆಂಗಳೂರು ಕಡೆಗೆ ಹೊರಟಿದ್ದರು. ಆದರೆ ಅದೇ ದಿನ ಲೋಕಾಯುಕ್ತ ಪೊಲೀಸರು ಹುಡುಕಾಟದ ನಂತರ ತುಮಕೂರು ಜಿಲ್ಲೆಯ ಕ್ಯಾತಸಂದ್ರ ಟೋಲ್​ ಬಳಿ ಮಾಡಾಳ್​ ವಿರುಪಾಕ್ಷಪ್ಪ ಅವರನ್ನು ಬಂಧಿಸಿದ್ದರು.

ಪ್ರಕರಣ ಸಂಬಂಧ ಜಾಮೀನು ನೀಡಲು ವಿಚಾರಣಾ ನ್ಯಾಯಾಲಯ ನಿರಾಕರಿಸಿದ್ದರಿಂದ ಪ್ರಶಾಂತ್ ಹೈಕೋರ್ಟ್ ಮೊರೆ ಹೋಗಿದ್ದರು. ಇದೇ ಪ್ರಕರಣದಲ್ಲಿ ಮಾರ್ಚ್​​ 27ರಂದು ಲೋಕಾಯುಕ್ತ ಪ್ರಕರಣದಿಂದ ಬಂಧನಕ್ಕೆ ಒಳಗಾಗಿದ್ದ ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ಅವರಿಗೆ ವಿಚಾರಣಾ ನ್ಯಾಯಾಲಯ ಏಪ್ರಿಲ್​ 15ರಂದು ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ:ಲಂಚ ಸ್ವೀಕಾರ ಪ್ರಕರಣ: ಮಾಡಾಳ್ ಪ್ರಶಾಂತ್​ಗೆ ಷರತ್ತುಬದ್ಧ ಜಾಮೀನು

Last Updated : Apr 24, 2023, 5:53 PM IST

ABOUT THE AUTHOR

...view details