ಕರ್ನಾಟಕ

karnataka

ETV Bharat / state

ದಾವಣಗೆರೆ: ರೈತರಿಗೆ ಫೇಕ್ ಸುಯೋಗ್ ಕಿಸಾನ್ ಕಾರ್ಡ್ ನೀಡಿ ವಂಚನೆ ಆರೋಪ

ಫೇಕ್ ಸುಯೋಗ್ ಕಿಸಾನ್ ಕಾರ್ಡ್ ನೀಡಿ ವಂಚನೆ ಆರೋಪ- 250 ರೂಪಾಯಿ ಪಡೆದು ಕಾರ್ಡ್​ ವಿತರಣೆ - ಎನ್​ಜಿಒ ಸಿಬ್ಬಂದಿಯನ್ನು ಕೂಡಿ ಹಾಕಿ ಹಣ ವಾಪಸ್​ ಪಡೆದ ರೈತರು

By

Published : Feb 18, 2023, 8:28 AM IST

Updated : Feb 18, 2023, 8:48 AM IST

farmers
ದಾವಣಗೆರೆ: ರೈತರಿಗೆ ಫೇಕ್ ಸುಯೋಗ್ ಕಿಸಾನ್ ಕಾರ್ಡ್ ನೀಡಿ ವಂಚನೆ ಆರೋಪ

ದಾವಣಗೆರೆ: ರೈತರಿಗೆ ಫೇಕ್ ಸುಯೋಗ್ ಕಿಸಾನ್ ಕಾರ್ಡ್ ನೀಡಿ ವಂಚನೆ ಆರೋಪ

ದಾವಣಗೆರೆ: ರೈತರು ಫೇಕ್ ಸುಯೋಗ್ ಕಿಸಾನ್ ಕಾರ್ಡ್ ಪಡೆದು ಮೋಸಹೋಗಿದ್ದು, ಕಾರ್ಡ್​ನಿಂದ ರೈತರು ಉಪಯೋಗ ಪಡೆಯಬಹುದೆಂಬ ಊಹೆ ಸುಳ್ಳಾಗಿದೆ. ಕೃಷಿ ಉಪಕರಣಗಳು, ಕೃಷಿ ಇಲಾಖೆಯಿಂದ ಬರುವ ಸೌಲಭ್ಯಗಳನ್ನು ಈ ಕಾರ್ಡ್​ನಿಂದ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿ ರೈತರನ್ನು ನಂಬಿಸಿ ವಂಚಿಸಿರುವ ಆರೋಪ ಕೇಳಿ ಬಂದಿದೆ. ವಿಷಯ ತಿಳಿದ ರೈತರು ಎನ್​ಜಿಒ ಸಿಬ್ಬಂದಿಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ತಮ್ಮಿಂದ ಪೀಕಿಸಿದ್ದ ಹಣವನ್ನು ವಾಪಸ್​ ಪಡೆದಿದ್ದಾರೆ.

ದಾವಣಗೆರೆ ಮೂಲದ ಸ್ಮಾರ್ಟ್​ ಎಜುಕೇಷನಲ್ ಅಂಡ್ ಆಗ್ರಿಕಲ್ಚರ್ ಸೇವಾ ಫೌಂಡೇಷನ್ ಎಂಬ ಎನ್​ಜಿಒ ವತಿಯಿಂದ ರೈತರಿಗೆ ಕೃಷಿ ಇಲಾಖೆಯಿಂದ ಸಿಗಬೇಕಾದ ಎಲ್ಲ ಸೇವೆಗಳು ಒಂದೇ ಕಡೆ ಸಿಗುತ್ತದೆ ಎಂದು ನಂಬಿಸಿ ಸುಯೋಗ್ ಎಂಬ ಕಾರ್ಡ್​ನ್ನು 250 ರೂಪಾಯಿ ಪಡೆದು ಮಾಡಿಸಿಕೊಡಲಾಗಿತ್ತು. ಆದರೆ, ಈ ಕಾರ್ಡಿನಿಂದಾಗಿ ನಮಗೆ ಯಾವುದೇ ಉಪಯೋಗ ಆಗಿಲ್ಲವೆಂದು ರೈತರು ದೂರಿದ್ದಾರೆ. ದಾವಣಗೆರೆ ತಾಲೂಕಿನ ಬೇತೂರು ಗ್ರಾಮ ಸೇರಿದಂತೆ ಜಿಲ್ಲಾದ್ಯಂತ ಸುಮಾರು 500 ಕ್ಕೂ ಹೆಚ್ಚು ರೈತರಿಗೆ ಕಾರ್ಡ್​ಗಳನ್ನು ಮಾಡಿಕೊಡಲಾಗಿದೆ.

ಇದರಿಂದ ಉಪಯೋಗ ಪಡೆಯದ ರೈತರು, ಮರುದಿನ ಮತ್ತೆ ಬೇತೂರು ಗ್ರಾಮಕ್ಕೆ ತೆರಳಿ ಸುಯೋಗ್ ಕಾರ್ಡ್ ಮಾಡಿಕೊಡುವ ಸಿಬ್ಬಂದಿಯನ್ನು ಹಿಡಿದು ಕಾರ್ಡ್​ನ ಉಪಯೋಗ ತಿಳಿಸುವಂತೆ ಪಟ್ಟು ಹಿಡಿದು ಕುಳಿತಿದ್ದರು. ಬಳಿಕ ಸರಿಯಾದ ಮಾಹಿತಿ ನೀಡದ ಕಾರಣ, ಸ್ಮಾರ್ಟ್​ ಎಜುಕೇಷನಲ್ ಅಂಡ್ ಆಗ್ರಿಕಲ್ಚರ್ ಸೇವಾ ಫೌಂಡೇಷನ್​ನ ನಾಲ್ಕೈದು ಸಿಬ್ಬಂದಿಯನ್ನು ಪಂಚಾಯತಿ ಕೋಣೆಯಲ್ಲಿ ಕೂಡಿ ಹಾಕಿ ತಮ್ಮ ಹಣವನ್ನು ವಾಪಾಸ್ ಕೊಡುವಂತೆ ಗಲಾಟೆ ಮಾಡಿದ್ದಾರೆ. ಬಳಿಕ ಫೌಂಡೇಷನ್​ನ ಮ್ಯಾನೇಜರ್ ನಿರಂಜನ್ ಆಗಮಿಸಿ ಸುಮಾರು 170ಕ್ಕೂ ಹೆಚ್ಚು ರೈತರ ಹಣವನ್ನು ಹಿಂದಿರುಗಿಸಿದ ಬಳಿಕ ಪ್ರಕರಣ ಸುಖಾಂತ್ಯ ಕಂಡಿದೆ.

ಇದನ್ನೂ ಓದಿ:ಭದ್ರಾವತಿ ಉಕ್ಕಿನ ಕಾರ್ಖಾನೆಯ ಕಾಂಪೌಂಡ್​ ಗೋಡೆ ಅಪ್ಪಿಕೊಂಡು ಕಾರ್ಮಿಕರ ಪ್ರತಿಭಟನೆ

ರೈತರು ಹೇಳುವುದೇನು?:ಘಟನೆಗೆ ಸಂಬಂಧಿಸಿ ಮಾತನಾಡಿದ ಬೇತೂರು ಗ್ರಾಮದ ಮುಖಂಡ ಕರಿಬಸಪ್ಪ ಅವರು, "ದಾವಣಗೆರೆ ತಾಲೂಕಿನ ಬೇತೂರು ಗ್ರಾಮದಲ್ಲಿ ಮೂರು ದಿನಗಳಿಂದ ಫೇಕ್ ಕಿಸಾನ್ ಕಾರ್ಡ್ ಮಾಡಿಕೊಡಲಾಗುತ್ತಿತ್ತು. ಈ ಕಾರ್ಡ್ ಮಾಡಲು ಕೃಷಿ ಇಲಾಖೆ ಬಳಿ ಪರ್ಮಿಷನ್ ಪಡೆದಿಲ್ಲ. ಕೆಲವರು ಈ ಬಗ್ಗೆ ಪ್ರಶ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬೇತೂರಿನಲ್ಲಿ 200 ರೈತರು ಕಾರ್ಡ್ ಮಾಡಿಸಿಕೊಂಡಿದ್ದು, ಒಂದು ಕಾರ್ಡಿಗೆ 250 ರೂಪಾಯಿ ಪಡೆದಿದ್ದಾರೆ. ಈ ಕಾರ್ಡ್ ಮಾಡಿಸಿದ್ದಲ್ಲಿ ಸರ್ಕಾರದಿಂದ ಬರುವ ಕೃಷಿ ಇಲಾಖೆಯ ಸೌಲಭ್ಯ ಪಡೆಯಬಹುದೆಂದು ನಂಬಿಸಿದ್ದರು. ಆದರೆ ಯಾವುದೇ ಸೌಲಭ್ಯ ನಮ್ಮ ರೈತರಿಗೆ ದೊರಕಿಲ್ಲ. ಇದೊಂದು ಫೇಕ್ ಕೃಷಿ ಕಾರ್ಡ್" ಎಂದು ದೂರಿದರು.

'ಅನುಮತಿ ಪಡೆದಿಲ್ಲ...':ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸುಯೋಗ್ ಕಾರ್ಡ್ ವಿತರಕರಾದ ಪ್ರಶಾಂತ್ ಅವರು, "ಸ್ಮಾರ್ಟ್​ ಎಜುಕೇಷನಲ್ ಅಂಡ್ ಅಗ್ರಿಕಲ್ಚರ್ ಸೇವಾ ಫೌಂಡೇಷನ್ ಎಂಬುದು ಎನ್​ಜಿಒ ಆಗಿದೆ. ಎಲ್ಲ ಸೌಲಭ್ಯಗಳನ್ನು ಪಡೆಯಲು ಈ ಕಾರ್ಡ್​ ನೀಡಲಾಗುತ್ತದೆ. ಇದು ಖಾಸಗಿ ಎನ್​ಜಿಒ ಆಗಿದ್ದು, ಇನ್ನು ಜಿಲ್ಲಾಧಿಕಾರಿ, ಎಸ್​ಪಿ, ಕೃಷಿ ಇಲಾಖೆ ಮತ್ತು ಜಿಪಂ ಅಧಿಕಾರಿಗಳಿಗೆ ಕಾರ್ಡಿನ ಬಗ್ಗೆ ಗಮನಕ್ಕೆ ತರಲಾಗಿದೆ ಹೊರೆತು ಅನುಮತಿ ಪಡೆದಿಲ್ಲ. 500 ಕಾರ್ಡ್​ಗಳನ್ನು ಮಾಡಲಾಗಿದ್ದು, ನಮಗೆ ರೈತರು ಸಂಪರ್ಕ ಮಾಡಿದ ಬೆನ್ನಲ್ಲೇ ಸಂಘ ಸಂಸ್ಥೆಗಳ ಗಮನಕ್ಕೆ ತಂದು ಸಬ್ಸಿಡಿ ಪಡೆಯುವಂತೆ ಮಾಡುವ ಕೆಲಸ ನಮ್ಮದಾಗಿದೆ" ಎಂದು ತಿಳಿಸಿದರು.

ಬೇತೂರು ಗ್ರಾ.ಪಂ. ಪಿಡಿಒ ಪ್ರತಿಕ್ರಿಯೆ: "ಸುಯೋಗ್ ಕಾರ್ಡ್ ಮಾಡಿಕೊಡುವ ಕೆಲ ಸಿಬ್ಬಂದಿಗಳು ನಮ್ಮ ಗ್ರಾ.ಪಂಚಾಯತ್​ಗೆ ಆಗಮಿಸಿ ಎನ್​ಜಿಒರವರು ಕಾರ್ಡ್ ಮಾಡಿಕೊಡುವುದಾಗಿ ಕೇಳೀಕೊಂಡರು. ರೈತರಿಗೆ ಸೌಲಭ್ಯ ಒದಗಿಸುವ ಸಲುವಾಗಿ ಕೇಳಿಕೊಂಡು ಕೃಷಿ ಕಾರ್ಡ್ ಮಾಡಿಕೊಟ್ಟಿದ್ದಾರೆ. 150 ಕ್ಕೂ ಹೆಚ್ಚು ಜನರಿಗೆ 250 ರೂಪಾಯಿ ಪಡೆದು ಕಾರ್ಡ್ ಮಾಡಿಕೊಡಲಾಗಿದೆ.

ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕಾಲರ್ ಶಿಪ್, ಕೃಷಿ ಸಲಕರಣೆ ಕೊಳ್ಳಲು ಸಬ್ಸಿಡಿಯನ್ನು ಕಾರ್ಡ್ ಪಡೆದ ರೈತರಿಗೆ ಕೊಡಿಸುವುದಾಗಿ ನಮ್ಮ ಗಮನಕ್ಕೆ ತಂದಿದ್ರು. ಜೊತೆಗೆ ನಾವು ಹೇಳಿದಂತೆ ಕಾರ್ಡ್​ಗಳನ್ನು ಮಾಡಿಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ದರು. ಒಟ್ಟಾರೆ ಪಂಚಾಯತಿ ಬಳಿ ಜನಸೇರುತ್ತಿದ್ದಂತೆ ದಾವಣಗೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ಪಂಚಾಯತಿಗೆ ಆಗಮಿಸಿದ ಸ್ಮಾರ್ಟ್​ ಎಜುಕೇಷನಲ್ ಅಂಡ್ ಆಗ್ರಿಕಲ್ಚರ್ ಸೇವಾ ಫೌಂಡೇಷನ್ ನ ಮ್ಯಾನೇಜರ್ ನಿರಂಜನ್ ಹಣ ನೀಡಿ ಗಲಾಟೆ ಸುಖಾಂತ್ಯವಾಗುವಂತೆ ಮಾಡಿದ್ದಾರೆ ಎಂದು ಬೇತೂರು ಗ್ರಾ.ಪಂ ಪಿಓ ಪ್ರೇಮಾ ಹೇಳಿದರು.

ಇದನ್ನೂ ಓದಿ:ಜೆಡಿಎಸ್ ಶಾಸಕ ಗೌರಿಶಂಕರ್ ಆಯ್ಕೆ ಅಸಿಂಧು ಆರೋಪ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Last Updated : Feb 18, 2023, 8:48 AM IST

ABOUT THE AUTHOR

...view details