ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ಅದೆಷ್ಟೋ ಮಕ್ಕಳು ಕೊರೊನಾದಿಂದ ತಮ್ಮ ಪೋಷಕರನ್ನು ಕಳೆದುಕೊಳ್ಳುತ್ತಿದ್ದಾರೆ. ಅಂತಹ ನತದೃಷ್ಟ ಮಕ್ಕಳಿಗೆ ಬೆಣ್ಣೆ ನಗರಿಯ ಖಾಸಗಿ ಶಾಲೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ.
ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಸಂಕಷ್ಟ ಕಾಲದಲ್ಲಿ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಪಾಡು ಹೇಳತೀರದು. ಅಂತಹ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ದಾವಣಗೆರೆಯಲ್ಲಿ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಗುರುಕುಲ ರೆಸಿಡೆನ್ಸಿಯಲ್ ಶಾಲೆ ಮುಂದಾಗಿದೆ.
ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಉಚಿತ ಶಿಕ್ಷಣ: ಗುರುಕುಲ ರೆಸಿಡೆನ್ಸಿಯಲ್ ಜಿಲ್ಲೆಯಲ್ಲಿ ಪೊಲಷಕರನ್ನು ಕಳೆದುಕೊಂಡ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಶಾಲಾ ಅಡಳಿತ ಮಂಡಳಿಯವರಾದ ನಸ್ರಿನ್ ಖಾನಮ್ ಹಾಗೂ ಅಬ್ದುಲ್ ಎನ್ನುವವರು ಈ ನಿರ್ಧಾರ ಮಾಡಿದ್ದು, ಕೋವಿಡ್ನಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ 1ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲು ಚಿಂತನೆ ನಡೆಸಲಾಗಿದೆ.
ಮಕ್ಕಳು ಸಮವಸ್ತ್ರ ಹಾಗೂ ಪುಸ್ತಕಗಳನ್ನು ಮಾತ್ರ ಕೊಂಡುಕೊಳ್ಳಬೇಕಾಗಿದ್ದು, ಉಳಿದ ಎಲ್ಲಾ ಶುಲ್ಕವನ್ನು ಶಾಲೆಯೇ ಭರಿಸುತ್ತದೆ ಎಂದು ಶಾಲಾ ಅಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಹೀಗೆ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರತಿಯೊಂದು ಶಾಲೆಯಲ್ಲಿ ಈ ರೀತಿ ನಿರ್ಧಾರ ಕೈಗೊಂಡರೆ ಕೋವಿಡ್ನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ.
ಒಟ್ಟಾರೆ ಗುರುಕುಲ ಶಾಲೆಯ ಈ ನಿರ್ಧಾರ ಅನಾಥ ಮಕ್ಕಳಿಗೆ ಆಸರೆಯಾಗುವಂತಿದ್ದು, ಶಾಲೆಯ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.