ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ದಾವಣಗೆರೆ: ನಮ್ಮ ಪಕ್ಷದವರು ಆಪರೇಷನ್ ಹಸ್ತ ಮಾಡುತ್ತಿಲ್ಲ ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು. ದಾವಣಗೆರೆಯಲ್ಲಿಂದು ಮಾಧ್ಯಮದವರೊಂದಿಗೆ ಆಪರೇಷನ್ ಹಸ್ತದ ವಿಚಾರವಾಗಿ ಮಾತನಾಡಿ "ಆಪರೇಷನ್ ಏನೂ ಇಲ್ಲ, ಪಕ್ಷದಲ್ಲಿ ಅಸಮಾಧಾನ ಇದ್ದಾಗ ಪಕ್ಷಾಂತರ ಮಾಡುತ್ತಾರೆ. ಅವರಾಗಿಯೇ ಕೆಲವರು ಪಕ್ಷಕ್ಕೆ ಬರುತ್ತಿದ್ದಾರೆ. ನಮ್ಮ ಪಕ್ಷದವರು ಆಪರೇಷನ್ ಮಾಡುತ್ತಿಲ್ಲ" ಎಂದರು.
ಇನ್ನು 6 ತಿಂಗಳಲ್ಲಿ ಸರ್ಕಾರ ಪತನವಾಗುತ್ತದೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಸರ್ಕಾರ ಪತನ ಆಗೋದಿಲ್ಲ, ಅದೆಲ್ಲ ಸುಳ್ಳು, ಭ್ರಮೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚೆನ್ನಾಗಿಯೇ ನಡೆಯುತ್ತಿದೆ" ಎಂದರು. ಇದೇ ವೇಳೆ, "ನಾನು ಲೋಕಸಭೆಗೆ ಸ್ಪರ್ಧೆ ಮಾಡೋದಿಲ್ಲ, ಕುಮಾರ ಬಂಗಾರಪ್ಪ ಕಾಂಗ್ರೆಸ್ ಸೇರುವುದರ ಬಗ್ಗೆ ಗೊತ್ತಿಲ್ಲ. ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರುವುದಕ್ಕೆ ನನ್ನ ಬಳಿ ಚರ್ಚೆ ಮಾಡಿದ್ದಾರೆ" ಎಂದು ಹೇಳಿದರು.
"ಕಾಂಗ್ರೆಸ್ಗೆ ಒಳ್ಳೆಯ ವಾತಾವರಣ ಇದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ರಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ಹೊಸ ಕಾರ್ಯಕ್ರಮ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಅಗತ್ಯತೆ ಇದೆ. ಸಿದ್ದರಾಮಯ್ಯ ಆ ಕೆಲಸ ಮಾಡುತ್ತಿದ್ದಾರೆ. ಹರಿಪ್ರಸಾದ್ ಒಳ್ಳೆಯ ಲೀಡರ್ ಅವರ ಸಹಕಾರ ಇದ್ದೇ ಇದೆ. ಅವರು ತಳಸಮುದಾಯದ ಸಮಾವೇಶ ಮಾಡುತ್ತಿರುವುದು ಗೊತ್ತಿಲ್ಲ, ಅನೇಕ ಸಂದರ್ಭದಲ್ಲಿ ಭಿನ್ನಾಭಿಪ್ರಾಯ ಇರುತ್ತೆ, ನಂತರ ಸರಿಯಾಗುತ್ತೆ" ಎಂದರು.
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿ, "ಸಿಎಂ ಬದಲಾವಣೆ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ. ಸದ್ಯ ಸಿದ್ದರಾಮಯ್ಯ ಮುಂದುವರೆಯುತ್ತಾರೆ. ಒಬ್ಬರಿಗೆ ಆಸ್ತಿ ಹಂಚಿ ಕೊಡೋಕೆ ಆಗಲ್ಲ, ಕೆಲವರಿಗೆ ಅವಕಾಶ ಸಿಗುತ್ತೆ. ಮುಂದೆ ಬೇರೆಯವರಿಗೆ ಮತ್ತೊಂದು ಅವಕಾಶ ಇರುತ್ತೆ. ಎಲ್ಲವನ್ನೂ ವರಿಷ್ಠರು ತೀರ್ಮಾನ ಮಾಡುತ್ತಾರೆ" ಎಂದು ಹೇಳಿದರು.
ಇದನ್ನೂ ಓದಿ:ಎಸ್ಇಪಿ ಎಂದರೆ ಸೋನಿಯಾ ಗಾಂಧಿ ಎಜುಕೇಶನ್ ಪಾಲಿಸಿ: ಎನ್ಇಪಿ ಟೀಕಿಸಿದ್ದ ಕಾಂಗ್ರೆಸ್ಗೆ ಬೊಮ್ಮಾಯಿ ತಿರುಗೇಟು