ದಾವಣಗೆರೆ: ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕಡೆಗಣಿಸಿರುವುದಕ್ಕೆ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಕುಳಿತುಕೊಂಡಿರುವ ಐವರು ರಾಜ್ಯ ಬಿಜೆಪಿಯನ್ನು ನಿಯಂತ್ರಿಸುತ್ತಿದ್ದಾರೆ. ಇನ್ನು ನಮ್ಮ ನಾಯಕರಿಗೆ ಬುದ್ಧಿ ಬಂದಿಲ್ಲ ಎಂದು ಹೊನ್ನಾಳಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿಯಲ್ಲಿ ಕಾಣದ ಕೈಗಳು ಈ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದಾಗಿ ಹೇಳಿದ್ದೆವು. ಆದರೆ ಬಿಜೆಪಿಗೆ ರಾಜ್ಯದಲ್ಲಿ ಆ ಸ್ಥಿತಿ ಬಂದಿದೆ. ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಲು ಆಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರನ್ನು ಎರಡು ವರ್ಷಗಳ ಹಿಂದೆ ಬದಲಾವಣೆ ಮಾಡಬೇಕಿತ್ತು, ಅದು ಆಗಿಲ್ಲ. ಅಧ್ಯಕ್ಷರು ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ. ಪಕ್ಷದಲ್ಲಿ ವರ್ಚಸ್ಸುಳ್ಳ ನಾಯಕರ ಕೊರತೆ ಇದೆ ಎಂದರು.
ನಮ್ಮ ಮುಖಂಡರು ಸೌಜನ್ಯಕ್ಕಾದರೂ ಕರೆ ಮಾಡಿ ಮಾತನಾಡುತ್ತಿಲ್ಲ. ನಮ್ಮನ್ನು ಬಿಜೆಪಿಯಿಂದ ಹೊರಕಳಿಸಲು ನೋಡುತ್ತಿದ್ದಾರೆ. ಈ ಗಟ್ಟಿ ಧ್ವನಿಯನ್ನು ಯಾರು ಅಡಗಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ್ದು ಯಡಿಯೂರಪ್ಪ, ಬೆಳೆಸಿದ್ದು ಯಡಿಯೂರಪ್ಪ, ಇವರಿಗೆ ಸಾಥ್ ನೀಡಿದ್ದು, ಈಶ್ವರಪ್ಪ ಮತ್ತು ಅನಂತಕುಮಾರ್ ಎಂದು ಹೇಳಿದರು. ಈಗ ಬಿಜೆಪಿ ಆಫೀಸಿನಲ್ಲಿರುವವರು ಯಾರೂ ಬಿಜೆಪಿ ಕಟ್ಟಿಲ್ಲ ಎಂದು ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ನಡೆಸಿದರು.