ಹರಿಹರ (ದಾವಣಗೆರೆ): ನದಿಯ ದಡದಲ್ಲಿ ರಾಣೆಬೆನ್ನೂರಿನ ಶನೇಶ್ವರ ದೇವಾಲದ ಅರ್ಚಕರ ತಂಡದಿಂದ ತುಂಗಾರತಿ ನೆರವೇರಿಸಲಾಯಿತು. ಸಹಸ್ರಾರು ಭಕ್ತರು ಪ್ರಥಮ ತುಂಗಾರತಿಯನ್ನು ನೋಡಿ ಕಣ್ತುಂಬಿಕೊಂಡರು.
ಕೋಡಿಯಾಲ ಹೊಸಪೇಟೆಯ ತುಂಗಭದ್ರಾ ತಟದಲ್ಲಿರುವ ಪುಣ್ಯಕೋಟಿ ಮಠದಲ್ಲಿ ಬಾಲಯೋಗಿ ಜಗದೀಶ್ವರ ಶ್ರೀಗಳ ನೇತೃತ್ವದಲ್ಲಿ ನಡೆದ ಪ್ರಥಮ ತುಂಗಾರತಿ ನೆರವೇರಿಸಿದ ನಂತರ ಧರ್ಮಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್, ಮಠಾಧೀಶರಾಗಿರುವವರು ಧಾರ್ಮಿಕ ನಿಷ್ಠೆ, ಪೂಜಾ ನಿಷ್ಠೆಯ ವಿಧಿ ವಿಧಾನಗಳನ್ನು ಅರಿತು, ಸಮುದಾಯದ ಜನರಿಗೆ ಆಚಾರ ವಿಚಾರಗಳನ್ನು ಬೋಧಿಸುವ ಬದಲು ಅನಾಚಾರದಿಂದ ನಡೆದುಕೊಳ್ಳುತ್ತಿರುವುದು ತಲೆ ತಗ್ಗಿಸುವಂತ ಕೆಲಸ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಖಾವಿ ಧರಿಸಿದ ಸ್ವಾಮೀಜಿ ಒಬ್ಬರು ಗರ್ಭಿಣಿಯೊಬ್ಬರಿಗೆ ಮಾಡಿದ ಪೂಜಾ ಪದ್ಧತಿಯನ್ನು ನೋಡಿದರೆ ಸಮಾಜಕ್ಕೆ ಇವರು ಯಾವ ರೀತಿ ಧಾರ್ಮಿಕ ಆಚರಣೆಗಳ ಸಂದೇಶ ನೀಡುತ್ತಿದ್ದಾರೆ ಎಂಬ ಯಕ್ಷ ಪ್ರಶ್ನೆ ಮೂಡಿದೆ. ಇಂತಹ ಶ್ರೀಗಳನ್ನು ಭಕ್ತರು ಪೀಠದಿಂದ ಕೆಳಗಿಳಿಸಿ ಸಮಾಜದ ಧಾರ್ಮಿಕ ಆಚರಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಖಾವಿಧಾರಿಗಳು ಭಕ್ತರ ಮನಸ್ಸನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಅದೇ ಭಕ್ತರು ಖಾವಿಧಾರಿಗಳ ಪ್ರತಿ ಹೆಜ್ಜೆಯನ್ನು ಗಮನಿಸುತ್ತಿರುತ್ತಾರೆ ಎಂಬುದು ಅಷ್ಟೇ ಸತ್ಯ. ಧರ್ಮ ಸಂದೇಶ ನೀಡುವ ಶ್ರೀಗಳು ತಮ್ಮ ಜೀವ ಪ್ರತಿಯೊಂದು ಹೆಜ್ಜೆಯನ್ನು ಸೂಕ್ಷ್ಮವಾಗಿ ಇಡಬೇಕು. ಪೀಠಾಧಿಪತಿಗಳಾದವರು ಅರಿಷಡ್ವರ್ಗಗಳನ್ನು ತ್ಯಜಿಸಿದಾಗ ಮಾತ್ರ ಸ್ವಾಮೀಜಿಯಾಗಲು ಸಾಧ್ಯ ಎಂದರು.