ಹರಿಹರ: ನಗರಕ್ಕೆ ಗುಜರಾತ್ನಿಂದ ಆಗಮಿಸಿದ್ದಾರೆ ಎನ್ನಲಾದ ಒಂದು ಕುಟುಂಬದ ಮೂವರು ಸೇರಿದಂತೆ ಮತ್ತೋರ್ವನನ್ನು ಕ್ವಾರಂಟೈನ್‌ನಲ್ಲಿಡಲು ಮಾಜಿ ಶಾಸಕ ಬಿ.ಪಿ.ಹರೀಶ್ ಗುತ್ತೂರು ಗ್ರಾಮಸ್ಥರ ಮನವೊಲಿಸಿದರು.
ನಗರದ ಇಂದಿರಾನಗರದಲ್ಲಿ ಈ ಕುಟುಂಬ ವಾಸವಿದ್ದು, ಈ ಕುಟುಂಬದ ಮಗಳು, ಅಳಿಯ ಹಾಗೂ ಮೊಮ್ಮಗ ಗುಜರಾತ್ ನಿಂದ ಶನಿವಾರ ವಾಪಸ್ ಇಲ್ಲಿಗೆ ಬಂದಿದ್ದಾರೆ. ಈ ಮೂವರು ವಾಪಸ್ ಬಂದಿರುವ ವಿಷಯ ತಿಳಿದ ನಗರದ ಒಂದು ಬಡಾವಣೆಯ ಜನ ಈ ಕುರಿತು ಅಧಿಕಾರಿಗಳ ಗಮನ ಸೆಳೆದರು. ಭಾನುವಾರ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಈ ಮೂವರನ್ನು ಹಾಗೂ ಮಹಾರಾಷ್ಟ್ರದಿಂದ ಮರಳಿದ್ದ ಇನ್ನೊಬ್ಬ ವ್ಯಕ್ತಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ನಂತರ ಅವರನ್ನು ಹೊರವಲಯದ ಗುತ್ತೂರು ಗ್ರಾಮದ ಹಾಸ್ಟೆಲ್‌ನಲ್ಲಿಡಲು ಪ್ರಯತ್ನ ಮಾಡಲಾಯಿತು.
ಇನ್ನು ಗುತ್ತೂರು ಗ್ರಾಮಸ್ಥರು ಶಂಕಿತರನ್ನು ಇಲ್ಲಿಡುವುದು ಬೇಡ ಎಂದು ತಕರಾರು ಮಾಡಿದರು. ಆಗ ಸ್ಥಳಕ್ಕೆ ಮಾಜಿ ಶಾಸಕ ಬಿ.ಪಿ.ಹರೀಶ್ ಮತ್ತು ಶಾಸಕ ಎಸ್.ರಾಮಪ್ಪರು ಬಂದು ಜನರ ಮನವೊಲಿಸಲು ಮಾಡಿದ ಯತ್ನ ಫಲ ನೀಡಲಿಲ್ಲ. ನಂತರ ಅಧಿಕಾರಿಗಳ ತಂಡ ಕೊಂಡಜ್ಜಿ ಹಾಸ್ಟೆಲ್ ಕಡೆಗೆ ಹೆಜ್ಜೆ ಹಾಕಿತು. ಈ ಸುದ್ದಿ ತಿಳಿದ ಕೊಂಡಜ್ಜಿ ಗ್ರಾಮಸ್ಥರು ಗ್ರಾಮದ ದ್ವಾರ ಬಾಗಿಲಲ್ಲೆ ಬೈಕ್‌ಗಳಲ್ಲಿ ರಸ್ತೆಗೆ ಅಡ್ಡಲಾಗಿ ನಿಂತು ಇವರನ್ನು ವಾಪಸ್ ಕರೆದುಕೊಂಡು ಹೋಗಿ ಎಂದರು.
ನಂತರ ಕೊಂಡಜ್ಜಿಯ ಹಾಸ್ಟೆಲ್ ಕ್ವಾರಂಟೈನ್‌ಗೆ ಸೂಕ್ತವಾಗಿಲ್ಲ ಎಂದು ಮಾಹಿತಿ ಪಡೆದು ಬಂದ ದಾರಿಗೆ ಸುಂಕವಿಲ್ಲದಂತೆ ತಂಡ ಮರಳಿತು. ನಂತರ ಮತ್ತೊಮ್ಮೆ ಜನರ ಮನವೊಲಿಸಿ ಗುತ್ತೂರಿನ ಹಾಸ್ಟೆಲ್‌ನಲ್ಲಿ ಈ ನಾಲ್ವರನ್ನು ಕ್ವಾರಂಟೈನ್‌ನಲ್ಲಿಡಲು ಅಧಿಕಾರಿಗಳ ತಂಡ ಸಫಲವಾಯಿತು. ಇನ್ನು ಈ ನಾಲ್ವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳಿಸಲಾಗಿದೆ. ಫಲಿತಾಂಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ತಿಳಿಸಿದರು.
ಇನ್ನು ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಚಂದ್ರಮೋಹನ್, ಸಿಪಿಐ ಶಿವಪ್ರಸಾದ್, ಗ್ರಾಮಾಂತರ ಪಿಎಸ್‌ಐ ಡಿ. ರವಿಕುಮಾರ್ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.