ಕರ್ನಾಟಕ

karnataka

By ETV Bharat Karnataka Team

Published : Oct 6, 2023, 7:43 PM IST

ETV Bharat / state

ರಾಗಿಗುಡ್ಡ ಗಲಭೆ ಪ್ರಕರಣ: ಮಾರ್ಜಾಲ ನ್ಯಾಯದಂತೆ ಕಾಂಗ್ರೆಸ್ ಸರ್ಕಾರದ ವರ್ತನೆ- ಸಿ.ಟಿ.ರವಿ

ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಿ.ಟಿ.ರವಿ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದರು.

ಮಾಜಿ ಸಚಿವ ಸಿ ಟಿ ರವಿ
ಮಾಜಿ ಸಚಿವ ಸಿ ಟಿ ರವಿ

ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆ

ದಾವಣಗೆರೆ:ಮಾರ್ಜಾಲ ನ್ಯಾಯದಂತೆ ಕಾಂಗ್ರೆಸ್ ಸರ್ಕಾರ ವರ್ತಿಸುತ್ತಿದೆ. ಯಾರು ಮತಾಂಧರಂತೆ ವರ್ತಿಸುತ್ತಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ದೌರ್ಜನ್ಯಕ್ಕೊಳಗಾದ ಜನರ ಮೇಲೂ ಕೇಸ್ ಹಾಕಿದ್ದಾರೆ. ಈ ಮೂಲಕ ನಾನು ನಿಮಗೂ ಅವರಿಗೂ ಇಬ್ಬರನ್ನೂ ಸರಿ ಮಾಡಿದ್ದೇನೆ ಎಂಬ ಮಾರ್ಜಾಲ ನ್ಯಾಯವನ್ನು ಈ ಸರ್ಕಾರ ನೀಡುತ್ತಿದೆ. ಇದರಿಂದ ಮತಾಂಧರಿಗೆ ಕುಮ್ಮಕ್ಕು ಸಿಗುತ್ತದೆ‌ ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಸಮರ್ಪಣಾ ಕಾರ್ಯಕ್ರಮಕ್ಕೂ ಮುಂಚಿತವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಔರಂಗಜೇಬ ಹಾಗೂ ಟಿಪ್ಪು ಸುಲ್ತಾನ್ ಫೋಟೊ ಹಾಕಿ ಅವರನ್ನು ವೈಭವೀಕರಿಸಿದ್ದಕ್ಕೆ ಬಿಟ್ಟಿದ್ದೇ ಅಪರಾಧ. ಔರಂಗಜೇಬ ಯಾರು?. ದೇವಾಲಯ ಧ್ವಂಸ ಮಾಡಿದವನು. ಜಜಿಯಾ ತಲೆಕಂದಾಯ ಹೇರಿದವನು. ಹಿಂದೂಗಳ ತೀರ್ಥಯಾತ್ರೆ ರದ್ದು ಮಾಡಿದವನು. ಚಿತ್ರಹಿಂಸೆ ನೀಡಿ ಹಿಂದೂಗಳನ್ನು ಮತಪರಿವರ್ತನೆ ಮಾಡಿದವನು. ಇಂತಹ ಔರಂಗಜೇಬನನ್ನು ವೈಭವೀಕರಿಸಿದ ಉದ್ದೇಶವೇನು ಎಂಬುದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ಗಲಾಟೆಯನ್ನು ಬಿಜೆಪಿಯವರೇ ಮಾಡಿಸಿರಬಹುದು ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿಕೆ ವಿಚಾರಕ್ಕೆ, ರಾಮಲಿಂಗ ರೆಡ್ಡಿಯವರು ಹಿರಿಯರು, ತಲೆಕೆಟ್ಟವರೂ ಹೀಗೆ ಮಾತನಾಡುವುದಿಲ್ಲ. ಅವರು ತಲೆಕೆಟ್ಟವರಂತೆ ಮಾತನಾಡಬಾರದು ಎಂದರು.

ಕಾಂಗ್ರೆಸ್ ನಾಯಕರು ನಿಜವಾದ ಹಿಂದೂಗಳು ಎಂಬ ಹೇಳಿಕೆ ವಿಚಾರಕ್ಕೆ, ಅಸಲಿ ಹಿಂದೂಗಳು ಕುಂಕುಮ ಬೇಡ ಎನ್ನುತ್ತಾರೆ, ಭಾಗವಧ್ವಜ ಹಾಗು ಕೇಸರಿ ಪೇಟ ಬೇಡ ಎನ್ನುತ್ತಾರೆ. ಏಕೆಂದರೆ ಅವರು ಅಸಲಿ ಹಿಂದೂಗಳಲ್ವಾ?. ನಾವು ನಕಲಿಗಳು ಕುಂಕುಮ, ಕೇಸರಿ ಧರಿಸಿ ತಿರುಗಾಡುತ್ತೇವೆ. ಭಾರತ್ ಮಾತಾಕಿ ಜೈ ಎನ್ನುತ್ತೇವೆ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅಸಲಿ ಹಿಂದೂಗಳಿಗೆ ಟಿಪ್ಪು ಸುಲ್ತಾನ್, ಔರಂಗಜೇಬ, ಒಸಾಮಾ ಬಿನ್ ಲಾಡೆನ್ ಎಂದರೆ ಪ್ರೀತಿ ಎಂದು ಟೀಕಿಸಿದರು.

ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ ಎಂಬ ಎಸ್.​ಟಿ.ಸೋಮಶೇಖರ್ ಮಾತಿಗೆ, ಅಧಿಕಾರ ಇದ್ದಾಗ ಎಸಿ ರೂಂನಲ್ಲಿದ್ದಂಗೆ ಇರುತ್ತೆ. ಅಧಿಕಾರ ಇಲ್ಲದಾಗ ಕೆಲವರಿಗೆ ಉಸಿರುಕಟ್ಟಿಸುವ ವಾತಾವರಣ ಇರುತ್ತೆ. ನಾವು ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ರಾಜಕಾರಣ ಮಾಡುತ್ತಿರುವವರು. ಅಧಿಕಾರ ಇಲ್ಲದಾಗ ಕೆಲವರು ವಿಲವಿಲ ಒದ್ದಾಡುತ್ತಾರೆ, ಉಸಿರುಕಟ್ಟಿಸುವ ವಾತಾವರಣ ಇರುತ್ತೆ. ಅಧಿಕಾರ ಇದ್ದಾಗಲೂ, ಇಲ್ಲದಾಗಲೂ ವಿಚಾರ ಬಿಟ್ಟು ರಾಜಕಾರಣ ಮಾಡೋಲ್ಲ ನಾವು ಎಂದು ಟಾಂಗ್ ಕೊಟ್ಟರು.

ಜೆಡಿಎಸ್-ಬಿಜೆಪಿ ಮೈತ್ರಿ:ಪಾರ್ಟಿ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದಕ್ಕೆ ನಾವು ಬದ್ದ. ಕೆಲವರು ಪರ್ಸನಲ್ ಅಜೆಂಡಾದಿಂದ ವಿರೋಧ ಮಾಡುತ್ತಿದ್ದಾರೆ. ನಾವು ಪರ್ಸನಲ್​ ಅಜೆಂಡಾ ಜೊತೆ ಇಲ್ಲ, ಪಾರ್ಟಿ ಅಜೆಂಡಾ ಜೊತೆ ಇದ್ದೆವು. ನಾವು ವೈಯಕ್ತಿಕ ಲಾಭ, ನಷ್ಟದ ಜೊತೆ ರಾಜಕೀಯ ಮಾಡಿಕೊಂಡು ಬಂದಿಲ್ಲ. ಕೇವಲ ಪಾರ್ಟಿ ಏನು ಹೇಳುತ್ತೋ ಅದನ್ನು ಕೇಳುತ್ತೇವೆ ಎಂದರು.

ಇದನ್ನೂ ಓದಿ:ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ABOUT THE AUTHOR

...view details