ದಾವಣಗೆರೆ:ಅಪೆ ಗೂಡ್ಸ್ ವಾಹನಕ್ಕೆ ಮಾಜಿ ಗೃಹ ಸಚಿವ ಎಂ. ಬಿ. ಪಾಟೀಲ್ ಪುತ್ರ ಸೇರಿದಂತೆ ಇಬ್ಬರು ಪ್ರಯಾಣಿಸುತ್ತಿದ್ದರು ಎನ್ನಲಾದ ಐಷಾರಾಮಿ ಕಾರು ಡಿಕ್ಕಿಯಾಗಿ ಓರ್ವ ಗಾಯಗೊಂಡಿರುವ ಘಟನೆ ಜಗಳೂರು ತಾಲೂಕಿನ ಬೆಣ್ಣೆಹಳ್ಳಿ-ದೋಣೆಹಳ್ಳಿ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದೆ.
ಮಾಜಿ ಗೃಹ ಸಚಿವರ ಪುತ್ರನ ಕಾರು ಅಪಘಾತ: ಆಟೋ ಚಾಲಕನಿಗೆ ಗಾಯ - ಮಾಜಿ ಸಚಿವ ಎಂಬಿ ಪಾಟೀಲ್ ಪುತ್ರ
ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ಅವರ ಪುತ್ರನದ್ದು ಎನ್ನಲಾದ ಕಾರು ಸರಕು ಸಾಗಣೆ ವಾಹನಕ್ಕೆ ಡಿಕ್ಕಿಯಾಗಿ ಓರ್ವ ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ಎಂ.ಬಿ. ಪಾಟೀಲ್ ಪುತ್ರ ಧೃವ ಪಾಟೀಲ್ ತನ್ನ ಇಬ್ಬರು ಸ್ನೇಹಿತರೊಂದಿಗೆ ವಿಜಯಪುರಕ್ಕೆ ಕಾರಿನ ಸಂಖ್ಯೆ ಕೆ.ಎ.51, ಎಂಪಿ 6729 ನಂಬರ್ನ ಐಷಾರಾಮಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗ್ತಿದೆ. ಈ ವೇಳೆ ಬೆಣ್ಣೆಹಳ್ಳಿ-ದೋಣೆಹಳ್ಳಿ ಸೇತುವೆ ಬಳಿ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಮುಂದೆ ಚಲಿಸುತ್ತಿದ್ದ ವಾಹನಕ್ಕೆ ಕಾರು ಅಪ್ಪಳಿಸಿದೆ ಎಂದು ತಿಳಿದುಬಂದಿದೆ.
ಈ ಘಟನೆಯಲ್ಲಿ ವಾಹನ ಚಾಲಕ ವಿರೇಶ್ ಎಂಬಾತನಿಗೆ ಎಡಗೈ, ಬಲಗಾಲು, ಮುಖ, ತಲೆ ಭಾಗದಲ್ಲಿ ಗಾಯಗಳಾಗಿದ್ದು, ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಧೃವ ಹಾಗೂ ಆತನ ಸ್ನೇಹಿತರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.