ದಾವಣಗೆರೆ:ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವುದಕ್ಕೆ ತೀವ್ರ ಅಸಮಾಧಾನಗೊಂಡಿರುವ ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಇಬ್ಬರು ಪುತ್ರಿಯರು ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಮೂರನೇ ಮಗಳು ಎಂ.ಪಿ.ವೀಣಾ ಹಾಗೂ ಹಿರಿಯ ಮಗಳು ಎಂ.ಪಿ.ಲತಾ ಪಕ್ಷೇತರ ಅಭ್ಯರ್ಥಿಗಳಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಹರಪನಹಳ್ಳಿಯ ಕಾಂಗ್ರೆಸ್ ಟಿಕೆಟ್ ಅನ್ನು ಕೊಟ್ರೇಶ್ಗೆ ನೀಡಲಾಗಿದೆ. ಟಿಕೆಟ್ ಕೈ ತಪ್ಪಿದ್ದಕ್ಕೆ ಅಕ್ಕ -ತಂಗಿಯರಿಬ್ಬರೂ ಬಂಡಾಯ ಎದ್ದಿದ್ದು ಕಾಂಗ್ರೆಸ್ ಅಭ್ಯರ್ಥಿಗೆ ತಲೆನೋವಾಗಿ ಪರಿಣಮಿಸಿದೆ. ಎಂ.ಪಿ ವೀಣಾ ಸೋಮವಾರ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇಂದು ಎಂ.ಪಿ.ಲತಾ ಸಾವಿರಾರು ಬೆಂಬಲಿಗರೊಂದಿಗೆ ಕೋಟೆ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಹರಪನಹಳ್ಳಿ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು.
ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾ ಮಾತನಾಡಿ, ಕಾಂಗ್ರೆಸ್ನಿಂದ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆ ಇತ್ತು. ಆದರೆ ಟಿಕೆಟ್ ನೀಡಿಲ್ಲ. ನಾನು ಪಕ್ಷದ ವಿರುದ್ಧ ಬಂಡಾಯವಾಗಿ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ, ಒಬ್ಬ ಮಹಿಳೆಯಾಗಿ ಪುರುಷರಿಗಿಂತ ಹೆಚ್ಚಾಗಿ ಪಕ್ಷಕ್ಕೆ ಕೆಲಸ ಮಾಡಿ ತೋರಿಸಿದ್ದೆ. ಎಂ.ಪಿ ಪ್ರಕಾಶ್ ಮಗಳು ಮತ್ತು ಎಂ.ಪಿ ರವೀಂದ್ರ ಅಕ್ಕ ಎಂಬ ಹೆಸರಿತ್ತು. ಪಕ್ಷದ ಎಲ್ಲಾ ಕೆಲಸವನ್ನು ಮಾಡಿದ್ದೆ, ಆದರೂ ಪಕ್ಷ ನನನ್ನು ಗುರುತಿಸಿಲ್ಲ ಎಂಬುದಕ್ಕೆ ನೋವಾಗಿದೆ. ಕ್ಷೇತ್ರದಿಂದ ಇಬ್ಬರೂ ಮಹಿಳೆಯರು ಅರ್ಜಿ ಹಾಕಿದ್ದೆವು. ಆದರೆ ಒಬ್ಬರಿಗೂ ಟಿಕೆಟ್ ನೀಡಿಲ್ಲ. ಇದರಿಂದ ಅವಮಾನವಾಗಿದೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ ಎಂದು ತಿಳಿಸಿದರು.