ಕರ್ನಾಟಕ

karnataka

ETV Bharat / state

ಹರಿಹರ ನಗರಸಭೆಯಲ್ಲಿ ಗೆದ್ದಲು ಹಿಡಿಯುತ್ತಿವೆ ಮಹತ್ವದ ಕಡತಗಳು; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೌನ್ಸಿಲರ್‌ಗಳ ಆಕ್ರೋಶ - ಪಾಲಿಕೆ ಕೌನ್ಸಿಲರ್ ಅಶ್ವಿನಿ

ಹರಿಹರ ನಗರಸಭೆಯಲ್ಲಿ ಸಾರ್ವಜನಿಕರಿಗೆ ಸಂಬಂಧಪಟ್ಟ ಕಡತಗಳು ಗೆದ್ದಲು ಹಿಡಿದಿವೆ. ಕಡತಗಳನ್ನಿಟ್ಟ ಕೋಣೆಗಳು ಕಸದ ತೊಟ್ಟಿಯಂತಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

files-are-destroyed-of-the-irresponsibility-of-officials-of-muncipality
ದಾವಣಗೆರೆ : ಹರಿಹರ ನಗರಸಭೆ ಅಧಿಕಾರಗಳ ಬೇಜವಾಬ್ದಾರಿಗೆ ಗೆದ್ದಲು ಹಿಡಿಯುತ್ತಿವೆ ಕಡತಗಳು

By ETV Bharat Karnataka Team

Published : Oct 22, 2023, 3:28 PM IST

ಈ ನಿರ್ಲಕ್ಷ್ಯವೇಕೆ?

ದಾವಣಗೆರೆ:ಸಾರ್ವಜನಿಕರಿಗೆ ಸಂಬಂಧಪಟ್ಟ ಕಡತಗಳನ್ನು ಆಯಾ ಇಲಾಖೆಗಳಲ್ಲಿ ಸುರಕ್ಷಿತವಾಗಿ ಇರಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ ಹರಿಹರ ನಗರಸಭೆ ಕಾರ್ಯಾಲಯದಲ್ಲಿರುವ ಕಡತಗಳು ಗೆದ್ದಲು ಹಿಡಿಯುತ್ತಿವೆ. ಕಡತಗಳ ಕೋಣೆ ಕಸದ ತೊಟ್ಟಿಯಂತಾಗಿದೆ. ಇಲ್ಲಿರುವ ದಾಖಲೆಗಳು ನಶಿಸಿ ಹೋಗುತ್ತಿವೆ. ಇದನ್ನು ಸರಿಪಡಿಸಲು ನಗರಸಭೆಯ ಕೌನ್ಸಿಲರ್ ಟೊಂಕಕಟ್ಟಿ ನಿಂತಿದ್ದಾರೆ. ಕಡತಗಳ ಕೋಣೆಗೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಸರ್ಕಾರವನ್ನು ಅವರು ಆಗ್ರಹಿಸಿದ್ದಾರೆ.

ನಗರಸಭೆ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಿಸಲು ಅಡಿಪಾಯ ಹಾಕಲಾಗಿದೆ. ಹಳೇ ಕಟ್ಟಡದಲ್ಲಿದ್ದ ಕಡತಗಳನ್ನು ಬೇರೊಂದು ಕೋಣೆಗೆ ವರ್ಗಾಯಿಸಲಾಗಿದ್ದು, ಎಲ್ಲೆಂದರಲ್ಲಿ ಎಸೆಯಲಾಗಿದೆ. ಸಾಕಷ್ಟು ದಾಖಲೆಗಳು ಗೆದ್ದಲು ಹಿಡಿದಿರುವುದು ನಗರಸಭೆ ಕೌನ್ಸಿಲರ್​ಗಳ ಆಕ್ರೋಶಕ್ಕೆ ಕಾರಣ.

ಖಾತೆ ಬದಲಾವಣೆ, ಆಸ್ತಿ ಕಂದಾಯ, ನೀರಿನ ಕಂದಾಯದ ದಾಖಲೆಗಳು, ಸಿಬ್ಬಂದಿ ವೇತನದ ಲೆಕ್ಕಾಚಾರದ ಪುಸ್ತಕಗಳು ಹೀಗೆ ಸಾಕಷ್ಟು ದಾಖಲೆಗಳು ಇಲ್ಲಿವೆ. ಈ ದಾಖಲೆಗಳನ್ನು ಗೆದ್ದಲು ಹಿಡಿದಿವೆ. ಸಾರ್ವಜನಿಕರು ಯಾವುದೇ ದಾಖಲೆಯನ್ನು ಕೇಳಿಕೊಂಡು ನಗರಸಭೆಗೆ ಬಂದರೆ ಪ್ರಯೋಜನವಾಗುತ್ತಿಲ್ಲ. ಕೌನ್ಸಿಲರ್ ಅಶ್ವಿನಿ ಕೃಷ್ಣ ಅವರು ಕೆಲವು ದಾಖಲೆ ಸಂಬಂಧ ನಗರಸಭೆಗೆ ಹಲವು ಬಾರಿ ಆಗಮಿಸಿದ್ದರು. ಆದರೆ ದಾಖಲೆಗಳು ಲಭ್ಯವಾಗಿಲ್ಲ. ಅಶ್ವಿನಿ ಕೃಷ್ಣ ಕಡತಗಳ ಕೋಣೆಗೆ ತೆರಳಿದಾಗ ಗೆದ್ದಲು ಹಿಡಿದಿರುವುದು ಗೊತ್ತಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಶ್ವಿನಿ, "ನಗರಸಭೆಯಲ್ಲಿ ದಾಖಲೆ ಕೇಳಿದರೆ ಅಧಿಕಾರಿಗಳು ಅನಾವಶ್ಯಕವಾಗಿ ಕಾಲಹರಣ ಮಾಡುತ್ತಿದ್ದರು. ದಾಖಲೆ ಕೊಡದೇ ಇದ್ದುದರಿಂದ ನಾನೇ ಕಡತ ಕೋಣೆಗೆ ತೆರಳಿ ನೋಡಿದೆ. ಅಲ್ಲಿ ಅವ್ಯವಸ್ಥೆ ಕಂಡುಬಂತು. ದಾಖಲೆಗಳನ್ನು ಸುರಕ್ಷಿತವಾಗಿಡುವುದು ಅಧಿಕಾರಿಗಳ ಕರ್ತವ್ಯ. ಆದರೆ ಸಾರ್ವಜನಿಕರ ದಾಖಲೆಗಳ ಸ್ಥಿತಿಗತಿ ನೋಡಿ ನೋವಾಗುತ್ತಿದೆ" ಎಂದು ಹೇಳಿದರು.

"ಈ ರೀತಿಯ ದಾಖಲೆಗಳನ್ನು ಸುರಕ್ಷಿತವಾಗಿಡಬೇಕು. ಸುಮಾರು ವರ್ಷಗಳ ದಾಖಲೆಗಳಿಲ್ಲಿವೆ. 1975-85ರ ಇಸವಿಯ ದಾಖಲೆಗಳು ಇರುತ್ತವೆ. ಜನರಿಗೆ ಅಗತ್ಯ ಸಂದರ್ಭಗಳಲ್ಲಿ ಸಿಗಲಿ ಎಂದು ಸುರಕ್ಷಿತವಾಗಿರಲಿ ಇಟ್ಟಿರುತ್ತಾರೆ. ಆದರೆ ಇಲ್ಲಿರುವ ದಾಖಲೆಗಳು ಗೆದ್ದಲು ಹಿಡಿದಿವೆ. ಮಳೆ ನೀರಿನಿಂದ ತೊಯ್ದು ಹಾಳಾಗಿವೆ. ನೂತನ ಕಟ್ಟಡ ನಿರ್ಮಾಣದ ಭರದಲ್ಲಿ ಯಾವುದೋ ಕೋಣೆಗೆ ತಂದು ಕಡತಗಳನ್ನು ಹಾಕಿದ್ದಾರೆ. ಅಧಿಕಾರಿಗಳು ಆ ಕಡೆ ತಿರುಗಿಯೂ ನೋಡಿಲ್ಲ‌. ಆದ್ದರಿಂದ ರಾಜ್ಯ ಸರ್ಕಾರ ಕಡತದ ಕೋಣೆಗಳ ಬಗ್ಗೆ ಗಮನ ಹರಿಸಬೇಕು" ಎಂದು ಅವರು ಒತ್ತಾಯಿಸಿದರು.

ಶಾಸಕ ಬಿ.ಪಿ.ಹರೀಶ್ ಪ್ರತಿಕ್ರಿಯಿಸಿ, "ನಗರಸಭೆಯ ನೂತನ ಕಟ್ಟಡವನ್ನು ನಿರ್ಮಾಣ ಮಾಡಲು ಹೋಗಿ ಅವ್ಯವಸ್ಥೆಯ ಆಗರ ಮಾಡಿದ್ದಾರೆ. ನಗರಸಭೆ ಬದಲಾವಣೆ ಮಾಡಬೇಕೆಂಬ ನಿರೀಕ್ಷೆ ಇದೆ. ಇದರಿಂದ ಎಲ್ಲಾ ಪಕ್ಷದವರು ಪಕ್ಷ ಭೇದ ಮರೆತು ಸರ್ಕಾರದ ಬಳಿ ನಿಯೋಗಕ್ಕೆ ತೆರಳಿ ಅನುದಾನ ಕೇಳಬೇಕೆಂದು ಅಂದುಕೊಂಡಿದ್ದೇವೆ. ನಾನು ವಿರೋಧ ಪಕ್ಷದಲ್ಲಿ ಗೆದ್ದಿರುವುದರಿಂದ ಅನುದಾನ ಕಡಿತವಾಗಿದೆ‌‌. ನೂತನ ಕಟ್ಟಡಕ್ಕಾಗಿ ಈ ಅವ್ಯವಸ್ಥೆಯಾಗಿದ್ದು, ತಕ್ಷಣ ಸರ್ಕಾರ ಅನುದಾನ ಕೊಟ್ಟು ನಗರಸಭೆ ಉನ್ನತಮಟ್ಟಕ್ಕೇರಿಸಬೇಕು" ಎಂದು ಹೇಳಿದರು.

ಇದನ್ನೂ ಓದಿ:ಸತೀಶ್ ಜಾರಕಿಹೊಳಿ ಕಾಂಗ್ರೆಸ್​​ನಲ್ಲಿ ಮೂಲೆಗುಂಪಾಗಲಿದ್ದಾರೆ, ಬೆಳಗಾವಿ ಟಿಕೆಟ್ ಕೂಡ ಕುಟುಂಬದ ಕೈ ತಪ್ಪಲಿದೆ: ಮುನಿರತ್ನ

ABOUT THE AUTHOR

...view details