ದಾವಣಗೆರೆ :ರಾಜ್ಯದಲ್ಲಿ ಮುಂಗಾರು ಬಿತ್ತನೆ ಕಾರ್ಯ ಚುರುಕುಗೊಳ್ಳುತ್ತಿದೆ. ರೈತರು ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧರಾಗುತ್ತಿದ್ದಾರೆ. ಆದರೆ ಮಳೆ ಕೆಲವು ಕಡೆ ಮಾತ್ರ ಸುರಿದಿದೆ. ಇನ್ನೂ ಹಲವೆಡೆ ಮಳೆರಾಯ ಕೃಪೆದೋರಿಲ್ಲ. ದಾವಣಗೆರೆಯಲ್ಲಿ ಬಿತ್ತನೆ ಮಾಡಲು ಮಳೆಗಾಗಿ ರೈತರು ಕಾದು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆ ಮೆಕ್ಕೆಜೋಳದ ಕಣಜ ಎಂದು ಹೆಗ್ಗಳಿಕೆ ಪಡೆದುಕೊಂಡಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಿತ್ತನೆ ಆಗಿದೆ. ಅಂದಾಜು 846 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಕಳೆದ ವರ್ಷ ಈ ಅವಧಿಯಲ್ಲಿ ಅಂದಾಜು 21,484 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ಸಲ ಮುಂಗಾರು ಕೈಕೊಟ್ಟಿದ್ದರಿಂದ ರೈತ ಸಮುದಾಯ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಪ್ರಸ್ತುತ ಅಲ್ಲಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದು, ಬೆರಳೆಣಿಕೆಯಷ್ಟು ರೈತರು ಬಿತ್ತನೆ ಮಾಡಿದ್ದಾರೆ.
ಇದನ್ನೂ ಓದಿ :ಕೈಕೊಟ್ಟ ಮಳೆರಾಯ: ವರುಣ ಕೃಪೆಗಾಗಿ ಪೂಜೆ ಸಲ್ಲಿಸಿ ಮೋಡದತ್ತ ಕಂಬಳಿ ಬೀಸಿದ ರೈತರು
ರೈತ ವಿಜಯ್ ಮಾತನಾಡಿ, "ಕಳೆದ ವರ್ಷ ಈ ಸಮಯಕ್ಕೆ ಮೆಕ್ಕೆಜೋಳ 3 ರಿಂದ 4 ಅಡಿ ಎತ್ತರಕ್ಕೆ ಬೆಳೆದಿತ್ತು. ಈ ಬಾರಿ ಮುಂಗಾರು ಮಳೆ ಬಾರದೇ ರೈತರು ಆತಂಕಕ್ಕೀಡಾಗಿದ್ದಾರೆ. ಈಗಾಗಲೇ ಭೂಮಿ ಉಳುಮೆ ಮಾಡಿ ಮಳೆಗಾಗಿ ಕಾಯುತ್ತಿದ್ದೇವೆ. ಜಿಲ್ಲೆಯ ಹೆಬ್ಬಾಳ, ಮಾಯಕೊಂಡ ಭಾಗದಲ್ಲಿ ಸಾಕಷ್ಟು ಮಳೆಯಾಶ್ರಿತ ಪ್ರದೇಶ ಇರುವುದರಿಂದ ಈ ಭಾಗದ ರೈತರು ಬೀಜ, ರಸಗೊಬ್ಬರವನ್ನು ಲಕ್ಷಗಟ್ಟಲೆ ಖರೀದಿ ಮಾಡುವ ಮೂಲಕ ಮಳೆಗಾಗಿ ಕಾದು ಕೂತಿದ್ದಾರೆ. ಅಡಿಕೆ, ಬಾಳೆ, ತೆಂಗು ಬೆಳೆಗೆ ಕೊಳವೆ ಬಾವಿ ಆಸರೆಯಾಗಿತ್ತು. ಅದರೆ ಕೊಳವೆ ಬಾವಿಗಳಲ್ಲೂ ನೀರಿನ ಅಭಾವ ತಲೆದೋರಿದೆ. ಹೀಗಾಗಿ ಸಾಲ ಮಾಡಿ ಕೃಷಿ ಮಾಡುವುದಕ್ಕೆ ಸಿದ್ದರಾಗಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ" ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ ಬಿತ್ತನೆಗೆ ಅಂದಾಜು 1,26,108 ಹೆಕ್ಟೇರ್ ಪ್ರದೇಶ ಗುರಿ ಹೊಂದಲಾಗಿತ್ತು. ಅದರೇ ಕೇವಲ 300 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕಜೋಳ ಬಿತ್ತನೆ ಮಾಡಲಾಗಿದೆ. ಇದಲ್ಲದೇ ಹತ್ತಿ ಬಿತ್ತನೆಗೆ 6,887 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ನಿಗದಿ ಮಾಡಲಾಗಿತ್ತು. ಕೇವಲ 535 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಬಿಳಿ ಜೋಳ ಬಿತ್ತನೆಗೆ ಅಂದಾಜು 2,400 ಹೆಕ್ಟೇರ್ ಸೂಚಿಸಲಾಗಿತ್ತು. ಕೇವಲ 07 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಈಗಾಗಲೇ ಶೇ 01 ರಷ್ಟು ಬಿತ್ತನೆಯಾಗಿರುವ ಬೆಳೆ ಕೂಡ ಬಿಸಿಲಿನ ಹೊಡೆತಕ್ಕೆ ಬಾಡಿ ಹೋಗಿರುವುದರಿಂದ ರೈತರಿಗೆ ದಿಕ್ಕೆಟ್ಟಿದ್ದಾರೆ.
ಇದನ್ನೂ ಓದಿ :Electricity bill: ದುಪ್ಪಟ್ಟು ವಿದ್ಯುತ್ ಬಿಲ್‌ಗೆ ಹೈರಾಣಾದ ದಾವಣಗೆರೆ ಹಳೇಬಾತಿ ಗ್ರಾಮಸ್ಥರು; ಸರ್ಕಾರದ ವಿರುದ್ಧ ಆಕ್ರೋಶ