ದಾವಣಗೆರೆ: ಭತ್ತದ ಬೆಳೆಗೆ ಭದ್ರಾ ಜಲಾಶಯದ ನೀರು ಕಡಿತಗೊಳಿಸಿದ್ದರಿಂದ ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ರೈತರು ನಿರಂತರ ಹೋರಾಟ ಕೈಗೊಂಡು ಸರ್ಕಾರದ ಮನಸೆಳೆದಿದ್ದರು. ರೈತರ ಹೋರಾಟಕ್ಕೆ ಮಣಿದ ಸರ್ಕಾರ ಹಾಗೂ ಕಾಡಾ ಇಲಾಖೆಯು ಇದೀಗ ಭತ್ತದ ಬೆಳೆಗೆ ಉಳಿದಿರುವ 43 ದಿನಗಳ ಕಾಲ ನೀರು ಹರಿಸಲು ಆದೇಶಿಸಿದೆ. ರೈತರ ಹೋರಾಟಕ್ಕೆ ಜಿಲ್ಲೆಯಲ್ಲಿ ಫಲ ಸಿಕ್ಕಂತೆ ಆಗಿದೆ.
ನೀರಿ ಹರಿಸುವಂತೆ ಕಳೆದ ಕೆಲ ದಿನಗಳ ಹಿಂದೆ ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ರೈತರು ದಾವಣಗೆರೆ ಬಂದ್ಗೆ ಕರೆ ನೀಡಿದ್ದರು. ದಾವಣರೆಗೆ ಬಂದ್ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದವು. ರೈತರ ಹೋರಾಟ ಸರ್ಕಾರದ ಗಮನಸೆಳೆಯಿತು. ಇದೀಗ ಸರ್ಕಾರ ಭದ್ರಾ ಜಲಾಶಯದಿಂದ ನೀರು ಹರಿಸಿದೆ. 2023-24 ನೇ ಸಾಲಿನಲ್ಲಿ ಭದ್ರಾ ಜಲಾಶಯದ ಮುಂಗಾರು ಬೆಳೆಗಳಿಗೆ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರನ್ನು ಹರಿಸಲಾಗುವುದು ಎಂದು ಕ.ನಿ.ನಿ.ನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಸುಜಾತ ತಿಳಿಸಿದ್ದಾರೆ.
ಭದ್ರಾ ಬಲದಂಡೆ ನಾಲೆಗಳಿಗೆ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 15 ರ ವರೆಗೆ ಒಟ್ಟು 20 ದಿನಗಳು ಹಾಗೂ ಅಕ್ಟೋಬರ್ 26 ರಿಂದ ನವೆಂಬರ್ 17 ರ ವರೆಗೆ ಒಟ್ಟು 23 ದಿನಗಳು ನೀರನ್ನು ಹರಿಸಲಾಗುವುದೆಂದು ಕಾಡಾದ ಅದೇಶದಲ್ಲಿ ಉಲ್ಲೇಖಿಸಿದೆ. ಇನ್ನು ಭದ್ರಾ ಎಡದಂಡೆ ನಾಲೆಗಳಿಗೆ ಈಗಾಗಲೇ ನೀರನ್ನು ಹರಿಸಲಾಗಿದೆ. ಅಕ್ಟೋಬರ್ 1ರ ವರೆಗೆ ಒಟ್ಟು 15 ದಿನಗಳು ನೀರನ್ನು ಹರಿಸಲಾಗುತ್ತದೆ. ನಂತರ ಅಕ್ಟೋಬರ್ 12 ರಿಂದ 26 ರ ವರೆಗೆ ಒಟ್ಟು 15 ದಿನ ಹಾಗೂ ನವೆಂಬರ್ 6 ರಿಂದ 17 ರ ವರೆಗೆ ಒಟ್ಟು 12 ದಿನಗಳು ನೀರನ್ನು ಹರಿಸಲಾಗುದು ಎಂದು ತಿಳಿಸಿದ್ದಾರೆ.