ದಾವಣಗೆರೆ : ಭದ್ರಾ ಜಲಾಶಯದಿಂದ ಸರ್ಕಾರವು 100 ದಿನಗಳ ಕಾಲ ನೀರು ಹರಿಸುವುದಾಗಿ ಹೇಳಿತ್ತು. ಆದರೆ, ಕೇವಲ 25 ದಿನಗಳ ಕಾಲ ನೀರು ಹರಿಸಿದೆ. ನೀರು ಹರಿಸುವುದನ್ನು ನಿಲ್ಲಿಸುವ ಸಲುವಾಗಿ ನಾಳೆ ಕಾಡಾ ಸಭೆ ಕರೆದಿರುವುದರಿಂದ ದಾವಣಗೆರೆ ನಗರದ ಎಸಿ ಕಚೇರಿ ಆವರಣದಲ್ಲಿ ಭಾರತೀಯ ರೈತ ಒಕ್ಕೂಟವು ಪ್ರತಿಭಟನೆ ನಡೆಸಿತು. ಸಭೆ ರದ್ದುಪಡಿಸದಿದ್ದರೆ ನೂರು ದಿನಗಳ ಕಾಲ ಧರಣಿ ನಡೆಸುವುದಾಗಿ ರೈತರು ಇದೇ ವೇಳೆ ಎಚ್ಚರಿಕೆ ನೀಡಿದರು.
ಭದ್ರಾ ಜಲಾಶಯ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ. ಇಲ್ಲಿನ ರೈತರು ಹೆಚ್ಚಾಗಿ ಭದ್ರಾ ಜಲಾಶಯದ ನೀರನ್ನು ನೆಚ್ಚಿಕೊಂಡಿದ್ದಾರೆ. ಸರ್ಕಾರ ನೂರು ದಿನಗಳ ಕಾಲ ನೀರು ಹರಿಸುವುದಾಗಿ ರೈತರಿಗೆ ಭರವಸೆ ನೀಡಿತ್ತು. ಆದರೆ, ಕೇವಲ 25 ದಿನಗಳ ಕಾಲ ಭದ್ರಾ ಜಲಾಶಯದಿಂದ ನೀರು ಹರಿದಿದೆ. ಉಳಿದ 75 ದಿನಗಳ ಕಾಲ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ. ನೀರು ನಿಲ್ಲಿಸುವ ಸಲುವಾಗಿ ನಾಳೆ ಕರೆದಿರುವ ಸಭೆಯನ್ನು ರದ್ದುಗೊಳಿಸಬೇಕು. ಉಳಿದ 75 ದಿನಗಳ ಕಾಲ ಭದ್ರಾ ಜಲಾಶಯದಿಂದ ನೀರು ಹರಿಸಿಬೇಕು ಎಂದು ಮನವಿ ಮಾಡಿದರು.
ಈಗಾಗಲೇ ರೈತರು ತಮ್ಮ ಜಮೀನುಗಳಲ್ಲಿ ನಾಟಿ ಮಾಡುವ ಮೂಲಕ ಎರಡು ಬಾರಿ ಗೊಬ್ಬರ ಚೆಲ್ಲಿದ್ದು, ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ, ಅದ್ರೇ ಇದೀಗ ಕಾಡಾದಿಂದ ನೀರು ನಿಲ್ಲಿಸಲು ಸಭೆ ಕರೆದಿರುವುದು ರೈತರು ಹೋರಾಟಕ್ಕಿಳಿಯುವಂತೆ ಮಾಡಿದೆ. ಇಂದು ಭಾರತೀಯ ರೈತ ಒಕ್ಕೂಟದಿಂದ ರೈತರು ದಾವಣಗೆರೆ ನಗರದ ಎಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ಈ ಬಗ್ಗೆ ಪ್ರತಿಕ್ರಿಯಿಸಿದ ರೈತ ಮುಖಂಡ ನಾಗೇಶ್ವರ್ ರಾವ್, ಭದ್ರಾ ಜಲಾಶಯದಿಂದ ನೂರು ದಿನಗಳ ಕಾಲ ನೀರು ಬರುತ್ತದೆ ಎಂದು ಕಾದು ಕುಳಿತಿದ್ದೆವು. ಸರ್ಕಾರ ನೀರು ಕೊಡುವುದಾಗಿ ಭರವಸೆ ನೀಡಿತ್ತು. ನಾವು ನಾಟಿ ಮಾಡಿ ಗೊಬ್ಬರ ಚೆಲ್ಲಿದ ಬಳಿಕ ನಿರ್ಣಯ ಬದಲಾವಣೆ ಮಾಡುವುದು, ಐಸಿಸಿ ಸಭೆ ಮಾಡ್ತೇವೆ ಎನ್ನುವುದು ಇದು ಆಟ ಅಲ್ಲ ಎಂದು ಆಕ್ರೋಶ ಹೊರಹಾಕಿದರು.