ದಾವಣಗೆರೆ :ಭದ್ರಾ ಡ್ಯಾಂನಿಂದ ನೂರು ದಿನ ನೀರು ಬಿಡುತ್ತೇವೆ ಎಂದು ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯ ರೈತರು ಭತ್ತ ನಾಟಿ ಮಾಡಿದ್ದರು. ದಾವಣಗೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಬರೋಬ್ಬರಿ ಒಂದೂವರೆ ಲಕ್ಷ ಎಕರೆಯಲ್ಲಿ ಭತ್ತವನ್ನು ರೈತರು ನಾಟಿ ಮಾಡಿ ಈಗಾಗಲೇ ಎರಡು ಬಾರಿ ಗೊಬ್ಬರ ಹಾಕಿದ್ದಾರೆ. ಆದರೆ, ರಾಜ್ಯ ಸರ್ಕಾರ ಇದ್ದಕ್ಕಿದ್ದಂತೆ ನೀರು ನಿಲ್ಲಿಸಿರುವುದು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದರಿಂದಾಗಿ ಆಕ್ರೋಶಗೊಂಡಿರುವ ರೈತರು ಬೀದಿಗಿಳಿದು ರಸ್ತೆ ತಡೆ ನಡೆಸಿ, ನೀರು ಹರಿಸುವಂತೆ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ.
ಒಂದೂವರೆ ಲಕ್ಷ ಎಕರೆಯಲ್ಲಿ ರೈತರು ಭತ್ತ ಬೆಳೆ ನಾಟಿ ಮಾಡಿದ್ದು, ಈಗ ನೀರಿಲ್ಲದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಶಿವಮೊಗ್ಗದ ಭದ್ರಾ ಜಲಾಶಯ ದಾವಣಗೆರೆ ಅನ್ನದ ಬಟ್ಟಲು ಅಂತಲೇ ಹೆಸರು. ಡ್ಯಾಂ ನಂಬಿ, ಲಕ್ಷಾಂತರ ರೈತರು ಬದುಕುತ್ತಿದ್ದಾರೆ.
ಈ ಹಿನ್ನೆಲೆ ಆಗಸ್ಟ್ 10 ರಿಂದ ನಿರಂತರ ನೂರು ದಿನ ಬಲದಂಡೆ ನಾಲೆಗೆ ನೀರು ಬಿಡುವುದಾಗಿ ಕಾಡಾ ಸಮಿತಿ ಹಾಗೂ ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಡ್ಯಾಂ ಪೂರ್ತಿ ಭರ್ತಿ ಆಗದ ಹಿನ್ನೆಲೆ ಬೇಸಿಗೆ ಬೆಳೆಗೆ ನೀರು ಸಿಗೋದಿಲ್ಲ, ಈ ಬಾರಿಯಾದರೂ ಭತ್ತ ಬೆಳೆಯೋಣ ಎಂದು ಲಕ್ಷಾಂತರ ರೈತರು ಭತ್ತವನ್ನು ನಾಟಿ ಮಾಡಿದ್ದರು. ಭತ್ತ ನಾಟಿ ಮಾಡಿ ಈಗಾಗಲೇ ತಿಂಗಳುಗಳೇ ಕಳೆದಿವೆ. ಆದರೆ ಈಗ ರೈತರಿಗೆ ಜಲಸಂಪನ್ಮೂಲ ಇಲಾಖೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಕೇವಲ 40 ದಿನಗಳಿಗೆ ಮಾತ್ರ ನೀರು ನೀಡಿ ಉಳಿದ 60 ದಿನಗಳ ಕಾಲ ನೀರನ್ನು ಕಡಿತಗೊಳಿಸಿದೆ. ನೂರು ದಿನ ನಿರಂತರ ಅಂತಾ ಆದೇಶ ಮಾಡಿರುವುದು ರೈತರಿಗೆ ಸಂಕಷ್ಟ ತಂದಿದೆ.
ಈ ವೇಳೆ ಪ್ರತಿಕ್ರಿಯಿಸಿದ ರೈತ ಮುಖಂಡರಾದ ಸತೀಶ್ ಅವರು, "ನೂರು ದಿನಗಳ ಕಾಲ ನೀರನ್ನು ಹರಿಸಲು ಸರ್ಕಾರ ಆದೇಶಿಸಿತ್ತು. ಇದರ ಬೆನ್ನಲ್ಲೇ ಒಂದೂವರೆ ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು, ನಾಲ್ಕೂವರೆ ಲಕ್ಷ ಮೆಟ್ರಿಕ್ ಟನ್ ಭತ್ತ ಹಾಗೂ ಎರಡು ಲಕ್ಷದ 70 ಸಾವಿರ ಮೆಟ್ರಿಕ್ ಟನ್ ಅಕ್ಕಿ ಉತ್ಪಾದನೆ ಆಗಲಿದೆ. ಇದೀಗ ನೀರು ಬಿಡದೆ ಇರುವುದು ಬೆಳೆಗೆ ಕುತ್ತು ಬರಲಿದೆ. ನೀರಾವರಿ ಸಲಹಾ ಸಮಿತಿ ನೀರು ಕೊಡ್ತೇವೆ ಎಂದು ಹೇಳಿದ್ರೆ, ಕೆಲವೊಮ್ಮೆ ಆನ್ ಅಂಡ್ ಆಫ್ ಮಾಡ್ತೀವಿ ಎಂದು ಹೇಳ್ತಾ, ಇದೀಗ ಕಳೆದ ದಿನ ನೀರು ನಿಲ್ಲಿಸಿದ್ದರಿಂದ ಸರ್ಕಾರ ರೈತರ ಆತ್ಮಹತ್ಯೆಗೆ ದಾರಿ ಮಾಡಿಕೊಟ್ಟಿದೆ'' ಎಂದು ಆಕ್ರೋಶ ಹೊರಹಾಕಿದ್ರು.