ರೈತರ ಮನವೊಲಿಸಿ ಸಭೆ ಕರೆದ ಜಿಲ್ಲಾಧಿಕಾರಿ ದಾವಣಗೆರೆ: ನೂರು ದಿನಗಳ ಕಾಲ ಭದ್ರಾ ಜಲಾಶಯದ ನೀರು ಹರಿಸುವುದಾಗಿ ಆದೇಶಿಸಿದ್ದ ರಾಜ್ಯ ಸರ್ಕಾರ ಇದ್ದಕ್ಕಿದ್ದಂತೆ ನಲವತ್ತೇ ದಿನಕ್ಕೆ ನೀರು ನಿಲ್ಲಿಸಿರುವುದನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸುತ್ತಿದ್ದ ರೈತರು ಇದೀಗ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ದೊಡ್ಡಮಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 4 ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಂಡಿದ್ದ ರೈತರನ್ನು ಜಿಲ್ಲಾಧಿಕಾರಿ ಹಾಗು ಎಸ್ಪಿ ಇಬ್ಬರು ಮನವೊಲಿಸಿದ್ದರಿಂದ ರೈತರು ಹೆದ್ದಾರಿ ಬಂದ್ ಧರಣಿ ಕೈಬಿಟ್ಟಿದ್ದಾರೆ. ಇನ್ನು ರೈತ ಮುಖಂಡರುಗಳಿಗೆ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಮಾಡೋಣ ನಿಮ್ಮ ಸಮಸ್ಯೆ ಬಗೆಹರಿಸೋಣ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಎಂವಿ ಅವರು ಆಹ್ವಾನಿಸಿದ ಬೆನ್ನಲ್ಲೇ ರೈತರು ಹೆದ್ದಾರಿ ಬಂದ್ ಹೋರಾಟ ಹಿಂಪಡೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ವೇಳೆ ರೈತ ಮುಖಂಡ ಬಿ ಎಂ ಸತೀಶ್ ಮಾತನಾಡಿ, ನೂರು ದಿನಗಳ ಕಾಲ ನೀರು ಹರಿಸುತ್ತೇವೆ ಎಂದು ಸರ್ಕಾರ ಆದೇಶಿಸಿತ್ತು. ಭತ್ತ ಬಿತ್ತನೆ ಮಾಡಿ ಬೆಳೆಗೆ ಔಷಧಿ ಸಿಂಪಡಣೆ ಮಾಡಿ, ಗೊಬ್ಬರ ಚೆಲ್ಲಿದ ಬಳಿಕ ನೀರು ನಿಲ್ಲಿಸಿದರೆ ರೈತರ ಜೀವದ ಜೊತೆ ಸರ್ಕಾರ ಚೆಲ್ಲಾಟ ಆಡಿದಂತೆ. ಜಲಸಂಪನ್ಮೂಲ ಸಚಿವ ಡಿಸಿಎಂ ಡಿಕೆ ಶಿವಕುಮಾರ್ ಹಾಗು ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ದಾವಣಗೆರೆ ಜಿಲ್ಲಾ ಉಸ್ತುವಾರಿ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ನಮ್ಮ ಕೂಗು ಕೇಳುತ್ತಿಲ್ಲ. ಇಷ್ಟು ದಿನ ಹೋರಾಟ ಮಾಡ್ತಿದ್ರು, ಸರ್ಕಾರ ನಮ್ಮನ್ನು ಕರೆದು ಮಾತನಾಡುವ ಗೋಜಿಗೆ ಹೋಗಿಲ್ಲ. ಈ ಹೋರಾಟ ನಾವು ನಿಲ್ಲಿಸುವುದಿಲ್ಲ. ನಾಳೆ ಟ್ರ್ಯಾಕ್ಟರ್ ರ‍್ಯಾಲಿ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ" ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ದಾವಣಗೆರೆ ರೈತರು ಭದ್ರಾ ಜಲಾಶಯದ ನೀರು ಹರಿಸುವುದನ್ನು ಏಕಾಏಕಿ ನಿಲ್ಲಿಸಿರುವುದನ್ನು ವಿರೋಧಿಸಿ ದಿನಕ್ಕೊಂದು ಹೋರಾಟ ಮಾಡುತ್ತಿದ್ದ ರೈತರು ನಿನ್ನೆ ರಾಷ್ಟ್ರೀಯ ಹೆದ್ದಾರಿ 4 ಅನ್ನು ತಡೆದು ಹೋರಾಟ ನಡೆಸಿದ್ದರು. ನೂರು ದಿನಗಳ ಕಾಲ ನೀರು ನೀಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ 40 ದಿನ ಮಾತ್ರ ನೀರು ಹರಿಸಿ, ಏಕಾಏಕಿ ಬಂದ್ ಮಾಡಿದೆ. ಇನ್ನೂ 60 ದಿನಗಳು ನೀರು ಹರಿಯಬೇಕಿದೆ. ಉಳಿದ 60 ದಿನಗಳಿಗೆ ಸೀಮಿತವಾಗಿದ್ದ ನೀರನ್ನು ಹರಿಸಿ ಎಂದು ಒತ್ತಾಯಿಸಿ, ರೈತರು ಹೋರಾಟ ನಡೆಸಿದ್ದರು.
ಕೆಲವು ದಿನಗಳ ಕಾಲ ನೀರಿಗಾಗಿ ನಗರದ ಜಲಸಂಪನ್ಮೂಲ ಇಲಾಖೆಯ ಮುಂದೆ ಧರಣಿ ಮಾಡಿದ್ದ ರೈತರು ನಿನ್ನೆ ಇದ್ದಕ್ಕಿದ್ದಂತೆ ರಾಷ್ಟ್ರೀಯ ಹೆದ್ದಾರಿ 4 ಅನ್ನು ಬಂದ್ ಮಾಡಿ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದ್ದರು. ಜಿಲ್ಲಾಡಳಿತ ಸ್ಥಳಕ್ಕಾಗಮಿಸದೆ ಇದ್ದ ಕಾರಣ ಆಕ್ರೋಶಿತರಾದ ರೈತರು ದಾವಣಗೆರೆ ನಗರದ ಬಾಡಾ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 4 ನ್ನು ಮತ್ತೆ ಬಂದ್ ಮಾಡಿದ್ದರು.
ಇಂದು ಜಿಲ್ಲಾಡಳಿತ ಸ್ಥಳಕ್ಕಾಗಮಿಸಿ ಮನವೊಲಿಸುವ ಯತ್ನ ನಡೆಸಿತು. ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ವೆಂಕಟೇಶ್ ಎಂವಿ, ಎಸ್ಪಿ ಉಮಾ ಪ್ರಶಾಂತ್ ಅವರು ರೈತರನ್ನು ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸುವ ಯತ್ನ ನಡೆಸಿದರು. ಆದರೆ ನಮಗೆ ನೀರು ಬೇಕೆ ಎಂದು ಪಟ್ಟು ಹಿಡಿದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ವಾಹನಗಳ ಸಂದಣಿ ಹೆಚ್ಚಾಗಿ ಇಡೀ ಹೆದ್ದಾರಿ ಟ್ರಾಫಿಕ್ ಜಾಮ್ ಆಗಿತ್ತು. ಬೇರೆ ಬೇರೆ ಊರುಗಳಿಗೆ ಪ್ರಯಾಣ ಮಾಡ್ತಿದ್ದವರಿಗೆ ಕೆಲ ಕಾಲ ತೊಂದರೆ ಆಯಿತು.
ಇದನ್ನೂ ಓದಿ:ದಾವಣಗೆರೆ: ನೂರು ದಿನ ನೀರು ಹರಿಸುವುದಾಗಿ ಹೇಳಿ ಸರ್ಕಾರ ಮಾತಿಗೆ ತಪ್ಪಿದೆ ಎಂದು ರೈತರ ಪ್ರತಿಭಟನೆ, ಆಕ್ರೋಶ