ಎತ್ತುಗಳು ಕಳವಾಗಿರುವ ಬಗ್ಗೆ ರೈತ ಲೋಕನಗೌಡ ಪಾಟೀಲ್ ಅವರು ಮಾತನಾಡಿದ್ದಾರೆ ದಾವಣಗೆರೆ : ಪ್ರೀತಿಯಿಂದ ಸಾಕಿದ್ದ ಎರಡು ಎತ್ತುಗಳು ಕಳುವಾಗಿದ್ದರಿಂದ ರೈತನೊಬ್ಬ ಕಳುವಾದ ಎತ್ತುಗಳಿಗಾಗಿ ಕಾಯುತ್ತಾ ಕೊಟ್ಟಿಗೆಯಲ್ಲಿಯೇ ಕುಳಿತ ಘಟನೆ (ಜುಲೈ 08) ಭಾನುವಾರದಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕಂಕನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಚ್ಚರಿಯಂತೆ ಜಾನುವಾರುಗಳನ್ನು ಹುಡುಕಿಕೊಡುವಂತೆ ರೈತನೊಬ್ಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಲೋಕನಗೌಡ ಪಾಟೀಲ್ ಎತ್ತುಗಳಿಗಾಗಿ ಕೊಟ್ಟಿಗೆಯಲ್ಲಿಯೇ ಕಾದು ಕುಳಿತಿದ್ದ ರೈತರಾಗಿದ್ದಾರೆ. ಎತ್ತುಗಳ ಮಾಲೀಕ ಲೋಕನಗೌಡ ಪಾಟೀಲ್ ಕೃಷಿ ಚಟುವಟಿಕೆಗಳಿಗಾಗಿ ಪ್ರೀತಿಯಿಂದ ಎರಡು ಎತ್ತುಗಳನ್ನು ತಂದು ಸಾಕಿದ್ದರು. ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದವು. ಬೆಳಗಿನ ಜಾವ ಮೇವು ಹಾಕಲು ರೈತ ಲೋಕನಗೌಡ ಪಾಟೀಲ್ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಎತ್ತುಗಳು ಕಳವಾಗಿರುವ ಬಗ್ಗೆ ರೈತ ಲೋಕನಗೌಡ ಪಾಟೀಲ್ ಅವರು ಮಾತನಾಡಿದ್ದಾರೆ ಎತ್ತುಗಳನ್ನು ಹುಡುಕಿ ಸುಸ್ತಾದ ರೈತ ತಡ ರಾತ್ರಿಯಿಂದ ಕಾಣಸಿಗದ ಎತ್ತುಗಳನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ಅರ್ಥೈಸಿಕೊಂಡಿದ್ದಾರೆ. ಕಳುವಾಗಿರುವ ಎರಡು ಎತ್ತುಗಳ ಬೆಲೆ ಸರಿಸುಮಾರು 1.50 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಎರಡು ಬಿಳಿ ಬಣ್ಣದ ಜೋಡೆತ್ತನ್ನು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಹಲವು ಗ್ರಾಮಗಳಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ. ಇದರಿಂದ ರೈತ ಲೋಕನಗೌಡ ಎತ್ತುಗಳು ಕಾಣದ ಬೆನ್ನಲ್ಲೇ ಆತಂಕದಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಎತ್ತುಗಳನ್ನು ಹುಡುಕಿಕೊಡುವಂತೆ ಪ್ರಕರಣ ದಾಖಲಿಸಿದ ರೈತ:ಎತ್ತುಗಳನ್ನು ಕಳೆದುಕೊಂಡ ರೈತ ಲೋಕನಗೌಡ ಪಾಟೀಲ್ ಅವರು ಪ್ರೀತಿಯ ಎತ್ತುಗಳನ್ನು ಹುಡುಕಿಕೊಡುವಂತೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದಲ್ಲದೇ ತನ್ನ ಎತ್ತುಗಳನ್ನು ಹುಡುಕಿ ಕೊಡುವಂತೆ ರಾಜಕೀಯ ನಾಯಕರ ಬಳಿಯು ರೈತ ಲೋಕನಗೌಡ ಪಾಟೀಲ್ ಮನವಿ ಮಾಡಿದ್ದಾರೆ. ಇದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಎತ್ತುಗಳ ಫೋಟೊ, ದೂರವಾಣಿ ನಂಬರ್ ನಮೂದಿಸಿ ಈ ಎತ್ತುಗಳು ಕಂಡರೆ ಕರೆ ಮಾಡಿ ತಿಳಿಸಿ ಎಂದು ರೈತ ಮನವಿ ಮಾಡಿಕೊಂಡಿದ್ದಾರೆ.
ಎಷ್ಟು ಹುಡುಕಿದರೂ ಸಿಗದ ಪ್ರೀತಿಯ ಎತ್ತುಗಳು :ಸಾಮಾಜಿಕ ಜಾಲತಾಣದಲ್ಲಿ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದರೂ ಕೂಡ ಎತ್ತುಗಳು ಮಾತ್ರ ಪತ್ತೆಯಾಗಿಲ್ಲ.ಇದರಿಂದ ಮನನೊಂದ ರೈತ ಲೋಕನಗೌಡ ಪಾಟೀಲ್ ದನ ಕಟ್ಟುತ್ತಿದ್ದ ಸ್ಥಳದಲ್ಲೇ ಕಾಯುತ್ತ ಕೂತಿದ್ದಾರೆ. ಜೋಡೆತ್ತಿನೊಂದಿಗೆ ಕಾಲ ಕಳೆದ ಅವರು, ಎತ್ತುಗಳು ನಾಪತ್ತೆಯಾಗಿರುವುದನ್ನು ನೆನೆದು ಕಣ್ಣೀರು ಹಾಕ್ತಿದ್ದಾರೆ. ಎತ್ತುಗಳಿಗಾಗಿ ಕಾದು ಕೂತಿರುವ ರೈತನ ಪರಿಸ್ಥಿತಿ ನೋಡಿ ಗ್ರಾಮಸ್ಥರು, ಕುಟುಂಬಸ್ಥರು ಮರುಗುತ್ತಿದ್ದಾರೆ. ಎತ್ತುಗಳನ್ನು ಕದ್ದವರನ್ನು ಬಂಧಿಸಿ ಜಾನುವಾರುಗಳನ್ನು ವಶಕ್ಕೆ ಪಡೆಯಬೇಕೆಂದು ಆಗ್ರಹಿಸುತ್ತಿದ್ದಾರೆ.
ಎತ್ತುಗಳು ಸುಮಾರು 1.50 ಲಕ್ಷ ಬೆಲೆ ಬಾಳುತ್ತವೆ :ಈ ಬಗ್ಗೆ ಪ್ರತಿಕ್ರಿಯಿಸಿದ ರೈತ ಲೋಕನಗೌಡ ಪಾಟೀಲ್ ಅವರು, ಜುಲೈ 08 ರ ಭಾನುವಾರ ತಡರಾತ್ರಿ ಕಳ್ಳರು ಎತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಸಾಕಷ್ಟು ಕಡೆ ಹುಡುಕಾಟ ನಡೆಸಿದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಈಗಾಗಲೇ ಪ್ರಕರಣ ದಾಖಲಿಸಿದ್ದೇನೆ. ರಾಜಕೀಯ ಮುಖಂಡರ ಗಮನಕ್ಕೂ ತಂದಿದ್ದೇನೆ. ಎತ್ತುಗಳು ಸುಮಾರು 1.50 ಲಕ್ಷ ಬೆಲೆ ಬಾಳುತ್ತವೆ. ದಯವಿಟ್ಟು ಅವುಗಳನ್ನು ಹುಡುಕಿಕೊಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ:ಮನೆ ಮುಂದೆ ಕಟ್ಟಿದ್ದ ಜೋಡೆತ್ತು ನಾಪತ್ತೆ: ಕಂಗಾಲಾದ ರೈತ