ದಾವಣಗೆರೆ: ಕೃಷಿಗೂ ಸೈ..ಹೈನೋದ್ಯಮಕ್ಕೂ ಜೈ ಎಂಬಂತೆ ರೈತರೊಬ್ಬರು ಗುಜರಾತ್ ಮೂಲದ 13 ಗಿರ್ ತಳಿಯ ಹಸುಗಳನ್ನು ಸಾಕಾಣಿಕೆ ಮಾಡಿ ಯಶಸ್ವಿಯಾಗಿದ್ದಾರೆ. ಒಂದು ಹೊತ್ತಿಗೆ ಒಂದು ಹಸು ಐದರಿಂದ ಏಳು ಲೀಟರ್ ಹಾಲು ಕೊಡುತ್ತಿದ್ದು, ದಿನಕ್ಕೆ ನಲವತ್ತರಿಂದ ಐವತ್ತು ಲೀಟರ್ ಹಾಲು ಸಿಗುತ್ತಿದೆಯಂತೆ. ಆದರೆ, ಈ ರೈತ ಹಾಲನ್ನು ಮಾರಾಟ ಮಾಡುವುದಿಲ್ಲ. ಬದಲಾಗಿ ಬೆಣ್ಣೆ, ತುಪ್ಪ, ಮಜ್ಜಿಗೆ ತಯಾರಿಸಿ ಮಾರಾಟ ಮಾಡುತ್ತಾರೆ.
ದಾವಣಗೆರೆಯ ಹೆಚ್ ಕಲಪನಹಳ್ಳಿಯ ಹೊನ್ನೂರು ಗ್ರಾಮದ ಶ್ರೀಪಾದರಾಜು ಎಂಬವರಿಗೆ ಮೊದಲಿನಿಂದಲೂ ಹೈನೋದ್ಯಮದಲ್ಲಿ ಬಹಳಷ್ಟು ಆಸಕ್ತಿಯಿತ್ತು. ಹೀಗಾಗಿಯೇ ಗೀರ್ ತಳಿಯ ಹಸುಗಳನ್ನು ಸಾಕುವ ಪ್ರಯತ್ನವು ಫಲ ನೀಡಿದೆ. ಬೆಂಗಳೂರಿನ ಬ್ರೋಕರ್ ಒಬ್ಬರನ್ನು ಸಂಪರ್ಕಿಸಿದ ಶ್ರೀಪಾದರಾಜು ಅವರು ಗುಜರಾತ್ಗೆ ತೆರಳಿ ಒಂದು ಗಿರ್ ಹಸುವಿಗೆ ಒಂದೂವರೆ ಲಕ್ಷ ರೂಪಾಯಿ ಕೊಟ್ಟು ಖರೀದಿಸಿ ಹೊನ್ನೂರಿಗೆ ತಂದಿದ್ದಾರೆ. ಇದೀಗ ಹಸುಗಳ ಸಂಖ್ಯೆ ಹದಿಮೂರಕ್ಕೇರಿದ್ದು, ಲಕ್ಷ ಲಕ್ಷ ಲಾಭ ಗಳಿಸುತ್ತಿದ್ದಾರೆ.
ಗಿರ್ ಹಸುಗಳು ರಾಜ್ಯಪಾಲರಿಗೂ ಅಚ್ಚುಮೆಚ್ಚು: ಈ ತಳಿಯ ಹಸುಗಳಿಗೆ ಮೇವಿನಲ್ಲಿ ಬೆಳ್ಳುಳ್ಳಿ, ಮೆಂತ್ಯ, ಹತ್ತು ಗ್ರಾಂ ಶುಂಠಿ ಬಳಸುವುದರಿಂದ ಹಾಲಿನಲ್ಲಿ ಪೋಷಕಾಂಶ ಹೆಚ್ಚು ಇರುತ್ತದೆ. ಅಲ್ಲದೇ ಈ ಹಾಲು ಮನುಷ್ಯರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಬೊಜ್ಜು ಬರುವುದಿಲ್ಲ. ಈ ತಳಿಯ ಎರಡು ಹಸುಗಳನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕೂಡ ಖರೀದಿಸಿ ತಮ್ಮ ಮನೆಯಲ್ಲಿಯೇ ಸಾಕುತ್ತಿದ್ದಾರಂತೆ.
ತಿಂಗಳಿಗೆ ಲಕ್ಷ ಸಂಪಾದನೆ: ತಿಂಗಳಿಗೆ ಬೆಣ್ಣೆ, ತುಪ್ಪ ಮಾರಾಟದಿಂದ ಸುಮಾರು 1,12,000 ರೂಪಾಯಿ ಸಂಪಾದನೆ ಆಗುತ್ತದೆ. ಹಸುಗಳಿಗೆ ಇಂತಿಷ್ಟು ಖರ್ಚು ಆಗಿ 30 ರಿಂದ 40,000 ರೂಪಾಯಿ ಲಾಭ ಬರುತ್ತದೆ. ಇದರ ಜೀವಿತಾವಧಿ 20 ವರ್ಷವಿದ್ದು, ಎಲ್ಲ ರೀತಿಯ ವಾಯುಗುಣಕ್ಕೂ ಹೊಂದಿಕೊಳ್ಳುತ್ತದೆ.