ದಾವಣಗೆರೆ:ಯುವತಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿ, ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಆಕೆಯ ಫೋಟೋ ಹಾಕಿದ ಆರೋಪಿಗೆ ಯುವತಿಯ ಕುಟುಂಬಸ್ಥರು ಧರ್ಮದೇಟು ನೀಡಿರುವ ಘಟನೆ ಜಿಲ್ಲೆಯ ಮಾಯಕೊಂಡ ಹೋಬಳಿಯ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ.
ಅತ್ತಿಗೆರೆ ಗ್ರಾಮದ ಗಣೇಶ್ ಎಂಬಾತನೇ ಹಲ್ಲೆಗೊಳಗಾದ ಯುವಕ. ಈತ ಅದೇ ಗ್ರಾಮದ ಯುವತಿಗೆ ಮೊಬೈಲ್, ವಾಟ್ಸ್ಆ್ಯಪ್ನಲ್ಲಿ ಸಂದೇಶ ಕಳುಹಿಸುತ್ತಿದ್ದ. ಅಲ್ಲದೇ, ಫೇಸ್ಬುಕ್ನಲ್ಲಿ ಯುವತಿಯ ಫೋಟೋ ಹಾಕಿ, ಕವನ ಬರೆಯುತ್ತಿದ್ದ ಎನ್ನಲಾಗಿದೆ.
ಈ ವಿಚಾರ ಯುವತಿಯ ಕುಟುಂಬಸ್ಥರಿಗೆ ತಿಳಿದು, ಯುವಕನಿಗೆ ಧರ್ಮದೇಟು ನೀಡಿದ್ದಾರೆ. ಅತ್ತಿಗೆರೆ ಗ್ರಾಮದಲ್ಲಿ ಯುವಕನನ್ನು ಅರೆಬೆತ್ತಲೆ ಮಾಡಿ, ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ನಂತರ ಅರೆಬೆತ್ತಲಾಗಿದ್ದ ಆತನನ್ನು ಗ್ರಾಮಸ್ಥರೆಲ್ಲ ಸೇರಿಕೊಂಡು ಗ್ರಾಮದಲ್ಲೆಲ್ಲ ಓಡಾಡಿಸಿದ್ದಾರೆ. ಇದಾದ ಬಳಿಕ ಮತ್ತೆ ದೇವಸ್ಥಾನದ ಬಳಿ ಕಂಬಕ್ಕೆ ಕಟ್ಟಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆ ನಡೆಸಿರುವ ವಿಡಿಯೋ ಸೆರೆಯಾಗಿವೆ. ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ:ಡ್ರೈವರ್ಗೆ ಫಿಟ್ಸ್ ಬಂದು ಟಿಟಿ ಪಲ್ಟಿ: 10 ಜನ ಪ್ರವಾಸಿಗರಿಗೆ ಗಾಯ