ಕರ್ನಾಟಕ

karnataka

ETV Bharat / state

ರಂಜಾನ್​ಗೆ ಬಟ್ಟೆ ಖರೀದಿ ಬಗ್ಗೆ ಸುಳ್ಳು ಸುದ್ದಿ : ಆರೋಪಿಗಳ ವಿರುದ್ದ ಕ್ರಮಕ್ಕೆ ಮನವಿ - False news about buying clothes for Ramadan

ಹರಿಹರ - ದಾವಣಗೆರೆ ನಗರದಲ್ಲಿ ಕೆಲವು ಯುವಕರು ಮುಸ್ಲಿಂ ಧರ್ಮೀಯ ಜನರಿಗೆ ಸಮಾಜದ ನಿರ್ಣಯದ ಕುರಿತು ತಿಳಿವಳಿಕೆ ನೀಡಿ, ಬಟ್ಟೆ ಖರೀದಿಸುವ ಬದಲು ಆ ಹಣವನ್ನು ಬಡವರಿಗೆ ದಾನ ಮಾಡಲು ತಿಳಿ ಹೇಳಲಾಗಿದೆ.

False news about buying clothes for Ramadan
ರಂಜಾನ್​ಗೆ ಬಟ್ಟೆ ಖರೀದಿ ಬಗ್ಗೆ ಸುಳ್ಳು ಸುದ್ದಿ : ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಿ ಎಂದು ಮನವಿ

By

Published : May 22, 2020, 8:30 PM IST

ಹರಿಹರ : ರಂಜಾನ್ ಬಟ್ಟೆ ಖರೀದಿ ವಿಷಯದಲ್ಲಿ ಸುಳ್ಳು ಸುದ್ದಿ ಹರಡುತ್ತಿರುವ ಫಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಮುಸ್ಲಿಂ ಮುಖಂಡರು ನಗರದಲ್ಲಿ ಉಪ ತಹಸೀಲ್ದಾರ್ ಚೆನ್ನವೀರಸ್ವಾಮಿ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಮುಖಂಡರು, ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾಗದೇ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಬಾರದು ಹಾಗೂ ಸಂಕಷ್ಟ ಸಮಯದಲ್ಲಿ ಬಟ್ಟೆ ಖರೀದಿಸುವ ಬದಲು ಅದೇ ಹಣವನ್ನು ಸಮಾಜದ ಬಡವರಿಗೆ ದಾನ ಮಾಡಲು ಇಡೀ ರಾಜ್ಯದ ಮುಸ್ಲಿಂ ಸಮಾಜ ನಿರ್ಣಯಿಸಿದೆ.

ಈ ಹಿಂದೆ ಹಿಂದೂ ಧರ್ಮೀಯರ ಯುಗಾದಿ, ಜೈನ ಧರ್ಮೀಯರ ಮಹಾವೀರ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಿ ಸರಕಾರದ ಲಾಕ್‌ಡೌನ್ ಹಾಗೂ ಸಾಮಾಜಿಕ ಅಂತರದ ಸೂಚನೆ ಪಾಲಿಸಲಾಗಿದೆ. ಇದೇ ಮಾದರಿಯಲ್ಲಿ ರಂಜಾನ್ ಹಬ್ಬವನ್ನು ಸುರಕ್ಷಿತ ಹಾಗೂ ಸರಳವಾಗಿ ಆಚರಿಸುವುದಷ್ಟೆ ಮುಸ್ಲಿಂ ಧರ್ಮದವರ ಉದ್ದೇಶವಾಗಿದೆ.

ಸರಕಾರ ಹಾಗೂ ವಕ್ಫ್ ಮಂಡಳಿಯ ಆದೇಶದ ಮೇರೆಗೆ ಪವಿತ್ರ ರಂಜಾನ್ ಮಾಸದಲ್ಲಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಭೋಜನ ಸ್ವೀಕಾರವನ್ನು ಶೇ.100 ರಷ್ಟು ರದ್ದು ಪಡಿಸಲಾಗಿದೆ. ಮನೆಗಳಲ್ಲೇ ಮುಸ್ಲಿಂ ಧರ್ಮೀಯರು ಈ ಚಟುವಟಿಕೆ ಮಾಡುತ್ತಿದ್ದಾರೆ. ಸರಕಾರದ ಆಶಯದಂತೆ ಸಾಮಾಜಿಕ ಅಂತರವನ್ನು ಪರಿಪೂರ್ಣವಾಗಿ ಕಾಪಾಡಲಾಗಿದೆ.

ವಸ್ತು ಸ್ಥಿತಿ ಹೀಗಿರುವಾಗ ಮೇ 24 ಅಥವಾ 25ರಂದು ರಂಜಾನ್ ಹಬ್ಬವಿರುವುದರಿಂದ ಮಾಹಿತಿ ಇಲ್ಲದ ಕೆಲವರು ಬಟ್ಟೆ ಅಂಗಡಿಗಳಿಗೆ ಹೋಗಿ ಬಟ್ಟೆ ಖರೀದಿಸಬಾರದೆಂಬ ಉದ್ದೇಶದಿಂದ ಹರಿಹರ - ದಾವಣಗೆರೆ ನಗರದಲ್ಲಿ ಕೆಲವು ಯುವಕರು ಮುಸ್ಲಿಂ ಧರ್ಮೀಯ ಜನತೆಗೆ ಸಮಾಜದ ನಿರ್ಣಯದ ಕುರಿತು ತಿಳಿವಳಿಕೆ ನೀಡಿ, ಬಟ್ಟೆ ಖರೀದಿಸುವ ಬದಲು ಆ ಹಣವನ್ನು ಬಡವರಿಗೆ ದಾನ ಮಾಡಲು ತಿಳಿ ಹೇಳಲಾಗಿದೆ.

ಇಂತಹ ಪ್ರಕರಣಗಳ ವಿಡಿಯೋಗಳನ್ನು ವೈರಲ್ ಮಾಡಿರುವ ಕೆಲವು ಕೋಮುವಾದಿಗಳು, ಮುಸ್ಲಿಂ ಧರ್ಮದ ಯುವಕರು ಹಿಂದು ಧರ್ಮೀಯರ ಬಟ್ಟೆ ಅಂಗಡಿಗಳಲ್ಲಿ ಖರೀದಿ ಮಾಡಬೇಡಿ ಎಂದು ಮುಸ್ಲಿಂ ಧರ್ಮೀಯರಿಗೆ ಬೆದರಿಕೆ ಹಾಕುತ್ತಿದ್ದಾರೆಂದು ಸುಳ್ಳಾಗಿ ಬಿಂಬಿಸಿದ್ದಾರೆ.

ಈ ಬಾರಿ ರಂಜಾನ್‌ಗೆ ಬಟ್ಟೆ ಖರೀದಿಸಬೇಡಿ ಎಂದು ಹೇಳಲಾಗಿದೆಯೆ ಹೊರತು, ಅನ್ಯ ಧರ್ಮೀಯರ ಅಂಗಡಿಗಳಲ್ಲಿ ಖರೀದಿ ಮಾಡಬೇಡಿರಿ ಎಂದು ಹೇಳಿಲ್ಲ. ಅದಾಗ್ಯೂ ಹರಿಹರ - ದಾವಣಗೆರೆಯಲ್ಲಿ ಯಾವ ಮುಸ್ಲಿಮರಿಗೆ ಸೇರಿದ ದೊಡ್ಡ ಬಟ್ಟೆ ಅಂಗಡಿಗಳೇ ಇಲ್ಲ.

ಈ ಪ್ರಕರಣದ ಕುರಿತು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಪರಿಪೂರ್ಣವಾಗಿ ತನಿಖೆ ಮಾಡಬೇಕು. ವಿನಾಕಾರಣ ಸುಳ್ಳು ಆರೋಪ ಮಾಡಿರುವ ಕೋಮುವಾದಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ABOUT THE AUTHOR

...view details