ದಾವಣಗೆರೆ :ಮೂರನೇ ಅಲೆಯಲ್ಲಿ ಮಕ್ಕಳಿಗೆ ಯಾವುದೇ ಅಪಾಯವಿಲ್ಲ ಎಂದು ತಜ್ಞರ ವರದಿಗಳಿವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಯಾವುದೇ ಅಪಾಯವಿಲ್ಲ ಎಂದು ತಜ್ಞರ ವರದಿಯಲ್ಲಿ ತಿಳಿಸಲಾಗಿದೆ.
ಹಾಗಂತಾ, ಯಾವ ಪೋಷಕರು ಮೈಮರೆಯುವಂತಿಲ್ಲ. ಅನ್ಲಾಕ್ ಆಗಿದೆ ಎಂದು ಯಾರೂ ಮೈಮರೆಯುವಂತಿಲ್ಲ. ಎರಡನೇ ಡೋಸ್ ಲಸಿಕೆ ಪಡೆಯುವವರೆಗೂ ಎಲ್ಲರೂ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೇಸ್ಗಳ ಸಂಖ್ಯೆ ಹೆಚ್ಚಿವೆ. ಕೇರಳದಲ್ಲಿ ಪ್ರತಿದಿನ 15 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣ ವರದಿಯಾಗುತ್ತಿವೆ. ಆ ಹಿನ್ನೆಲೆ ಕರ್ನಾಟಕದ ಗಡಿಭಾಗದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ. ಕರ್ನಾಟಕದಲ್ಲಿ ಕೇಸ್ಗಳ ಸಂಖ್ಯೆ ಇಳಿಮುಖವಾಗುತ್ತಿವೆ. ಪ್ರತಿದಿನ 1.50 ಲಕ್ಷದಷ್ಟು ಟೆಸ್ಟಿಂಗ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಸದ್ಯ ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 2ನೇ ಪ್ಯಾಕೇಜ್ನಲ್ಲಿ ಕರ್ನಾಟಕಕ್ಕೆ 1500 ಕೋಟಿ ರೂ. ಬರುತ್ತಿದೆ. 3ನೇ ಅಲೆ ಸಂಭಾವ್ಯದ ಹಿನ್ನೆಲೆ ದೊರೆಯುತ್ತಿರುವ ವಿಶೇಷ ಪ್ಯಾಕೇಜ್ ಇದಾಗಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರ, ಪಿಹೆಚ್ಸಿಗಳಲ್ಲಿ ಮಕ್ಕಳ ವಿಶೇಷ ವಾರ್ಡ್ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲು ಹಣ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದಿದ್ದಾರೆ.
ಇದನ್ನೂ ಓದಿ :ನಾನು ಸಿನಿಮಾದವನಾಗಿ ಮಾತನಾಡಿದ್ದೇನೆ, ಹೆಚ್ಡಿಕೆ ರಾಜಕೀಯ ಬಗ್ಗೆ ಮಾತನಾಡಿಲ್ಲ : ರಾಕ್ಲೈನ್ ವೆಂಕಟೇಶ್
ದಾವಣಗೆರೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈ ಬಗ್ಗೆ ಪರಿಶೀಲಿಸಲು ದಾವಣಗೆರೆಗೆ ಬಂದಿರುವೆ. ದಾವಣಗೆರೆ ಅಲ್ಲದೇ 9 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಆಗಲಿವೆ. ಈಗಾಗಲೇ ಸರ್ಕಾರದಿಂದ ಕಾಲೇಜು ಸ್ಥಾಪನೆಗೆ ನಿರ್ಧರಿಸಲಾಗಿದೆ.
ಖಾಸಗಿ ಸಹಭಾಗಿತ್ವದಲ್ಲಿ ಪಿಪಿಪಿ ಮಾದರಿಯಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.